ದೇವದಾರಿ ಗಣಿಗಾರಿಕೆ ಯೋಜನೆಗೆ 2019ರಲ್ಲೇ ಅನುಮತಿ, ಪರಿಸರ ರಕ್ಷಣೆಗೆ ಕಂಪನಿ ಬದ್ಧ : ಎಚ್.ಡಿ.ಕುಮಾರಸ್ವಾಮಿ

Update: 2024-06-18 12:53 GMT

ಬೆಂಗಳೂರು : ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಗಣಿಗಾರಿಕೆ ಯೋಜನೆಗೆ 2019ರಲ್ಲಿ ರಾಜ್ಯ ಸರಕಾರವೇ ಅನುಮತಿ ಕೊಟ್ಟಿದ್ದು, ನಂತರ ಕೇಂದ್ರ ಸರಕಾರದ ಪರಿಸರ ಇಲಾಖೆ ಅನುಮತಿ ನೀಡಿದೆ. ಪರಿಸರ ರಕ್ಷಣೆಗೆ ಕಂಪೆನಿಯು ಬದ್ಧ ಎಂದು ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದ್ದು, ಅರಣ್ಯ ನಾಶಕ್ಕೆ ನಾನು ಸಹಿ ಹಾಕಿದ್ದಲ್ಲ. ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ(ಕೆಐಒಸಿಎಲ್) ಕೈಗೆತ್ತಿಕೊಂಡಿರುವ ಗಣಿಗಾರಿಕೆ ಯೋಜನೆಯ ಬಗ್ಗೆ ಕಳವಳ ಬೇಡ ಎಂದರು.

ರಾಜ್ಯದಲ್ಲಿ ಉಕ್ಕು ಉತ್ಪಾದನೆ ಆಗಬೇಕು ಹಾಗೂ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಿ ನಮ್ಮ ಯುವಕರಿಗೆ ಉದ್ಯೋಗ ದೊರೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಆಶಯದಂತೆ ಜಿಡಿಪಿ ವೃದ್ಧಿಗೆ ಹೆಚ್ಚು ಕಾಣಿಕೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಉಳಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಜನರಲ್ಲಿ ಸ್ವಲ್ಪ ಮಟ್ಟಿಗಿನ ಆತಂಕ ಉಂಟಾಗುವ ರೀತಿಯಲ್ಲಿ ಪ್ರಚಾರವಾಗಿದೆ. 2019ರಲ್ಲಿ ದೇವದಾರಿ ಗಣಿಗಾರಿಕೆ ಯೋಜನೆಗೆ 404 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ದೊರೆತಿದೆ. ಆದರೆ, ಕುಮಾರಸ್ವಾಮಿ ಅವರು ಗಣಿಗಾರಿಕೆಗೆ ಅನುಮತಿ ನೀಡುವ ಯೋಜನೆಗೆ ಸಹಿ ಹಾಕಿದ್ದು, ಅರಣ್ಯ ಮತ್ತು ಜೀವರಾಶಿಗಳಿಗೆ ಹಾನಿ ಆಗುತ್ತದೆ. 99 ಸಾವಿರ ಮರಗಳಿಗೆ ಧಕ್ಕೆ ಆಗುತ್ತದೆ ಎಂದು ವರದಿಗಳು ಬಂದಿವೆ. ಆದರೆ, ಅರಣ್ಯ ನಾಶದ ಬಗ್ಗೆ ಆತಂಕ ಬೇಡ ಎಂದು ಅವರು ತಿಳಿಸಿದರು.

ಕುದುರೆಮುಖ ಕಂಪೆನಿ ಅದಿರು ತೆಗೆಯುವ ಕೆಲಸ ಪ್ರಾರಂಭ ಮಾಡುವ ಮುನ್ನವೇ ಸುಮಾರು 194 ಕೋಟಿ ರೂಪಾಯಿ ವೆಚ್ಚದಲ್ಲಿ 808 ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯವಾಗಿ ಅರಣ್ಯ ಬೆಳೆಸಲಿದೆ. ಅದಕ್ಕೆ ಅರಣ್ಯ ಇಲಾಖೆಗೆ ಹಣ ಪಾವತಿಸಿದೆ. ಜೀವರಾಶಿಗೆ ತೊಂದರೆಯಾಗದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ವಿಷಯವನ್ನು ಆ ಭಾಗದ ಜನತೆ ಗಮನಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಜಾಗತಿಕವಾಗಿ ಅದರಲ್ಲಿಯೂ ಚೀನಾ, ತೈವಾನ್, ದಕ್ಷಿಣ ಕೊರಿಯಾ ಪೈಪೋಟಿ ಎದುರಿಸಲು ಮೌಲ್ಯಾಧಾರಿತ ಉಕ್ಕು ಉತ್ಪಾದನೆ ಕಡೆ ಹೆಚ್ಚು ಗಮನ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅದರಂತೆ ಸ್ಟೀಲ್ ಉತ್ಪಾದನೆಗೆ ಅಗತ್ಯವಾದ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಸೆಮಿಕಂಡಕ್ಟರ್ ಕ್ಷೇತ್ರದ ಭಾರತ ಮುನ್ನಡೆ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಆದರೆ, ಆ ನಾನು ಕೊಟ್ಟ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಕೇಂದ್ರ ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.

ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಯೂ ಟರ್ನ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಸೆಮಿಕಂಡಕ್ಟರ್ ಕೈಗಾರಿಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕಿದೆ. ತೈವಾನ್, ಅಮೆರಿಕದಲ್ಲಿ ಈ ಉದ್ಯಮ ದೊಡ್ಡಮಟ್ಟದಲ್ಲಿದೆ. ಅದಕ್ಕೆ ಮೋದಿಯವರು ಪ್ರೊತ್ಸಾಹ ನೀಡಲು ಒಂದು ಬೃಹತ್ ಯೋಜನೆ ಜಾರಿಗೆ ತಂದಿದ್ದಾರೆ. ಇದರಲ್ಲಿ ಯೂಟರ್ನ್ ಪ್ರಶ್ನೆ ಏನೂ ಇಲ್ಲ. ದೇಶದ ಪ್ರಗತಿ ಅಷ್ಟೇ ಮುಖ್ಯ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News