ದೇವೇಗೌಡರ ಜೊತೆ ಚರ್ಚಿಸಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ : ಎಚ್.ಡಿ.ಕುಮಾರಸ್ವಾಮಿ

Update: 2024-07-06 15:35 GMT

ಬೆಂಗಳೂರು : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಧಿಕಾರವನ್ನು ಪಕ್ಷದ ಶಾಸಕರು, ನನಗೆ ನೀಡಿದ್ದು, ಈ ಬಗ್ಗೆ ರಾಷ್ಟ್ರೀಯಾಧ್ಯಕ್ಷ ದೇವೆಗೌಡರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶನಿವಾರ ನಗರದಲ್ಲಿರುವ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.15ರಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ನಮ್ಮ ಶಾಸಕರ ಜತೆ ಸುದೀರ್ಘವಾಗಿ ಚರ್ಚೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.

ಶಾಸಕಾಂಗ ಪಕ್ಷದ ನಾಯಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ದೇವೆಗೌಡರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಶಾಸಕರು ನನಗೆ ಅಧಿಕಾರ ನೀಡಿದ್ದಾರೆ. ಲೋಕಸಭಾ ಚುನಾವಣೆ ನಂತರ, ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿರುವುದರಿಂದ ನೂತನ ನಾಯಕನನ್ನು ಆಯ್ಕೆ ಮಾಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಪಕ್ಷವನ್ನು ತಳಮಟ್ಟದಿಂದ ಮರು ಸಂಘಟನೆ ಮಾಡುವುದು, ಸದಸ್ಯತ್ವ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುವುದು, ವಿಧಾನ ಮಂಡಲದ ಕಲಾಪದಲ್ಲಿ ಮಿತ್ರಪಕ್ಷ ಬಿಜೆಪಿ ಜತೆ ಸೇರಿ ಜನಪರವಾಗಿ ಹೋರಾಟ ನಡೆಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಯಿತು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪದಾಧಿಕಾರಿಗಳ ಬದಲಾವಣೆ ಮಾಡಲಾಗುವುದು. ಹೊಸ ರಾಜ್ಯಾಧ್ಯಕ್ಷರ ಚುನಾವಣೆಯೂ ನಡೆಯಲಿದೆ. ಸದಸ್ಯತ್ವ ಅಭಿಯಾನಕ್ಕೆ ರಾಜ್ಯದ 31 ಜಿಲ್ಲೆಗಳಲ್ಲಿನ ವಿಧಾನಸಭೆ ಕ್ಷೇತ್ರಗಳಲ್ಲಿ ಮುಖಂಡರಿಗೆ ಉಸ್ತುವಾರಿ ಕೊಡಲಾಗುವುದು. ಕೋರ್ ಕಮಿಟಿ ಸದಸ್ಯರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಎಲ್ಲರೂ ಈ ಬಗ್ಗೆ ಬದ್ಧತೆಯಿಂದ ಕೆಲಸ ಮಾಡಬೇಕು. ಈ ಮೂಲಕ ನಾವು ಜೆಡಿಎಸ್ ಪಕ್ಷವನ್ನು ಕೇಡರ್ ಬೇಸ್ ಪಕ್ಷವನ್ನಾಗಿ ರೂಪಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಅವಿರತವಾಗಿ ಶ್ರಮಿಸಿ ಒಳ್ಳೆಯ ಫಲಿತಾಂಶ ತಂದುಕೊಟ್ಟಿದ್ದಾರೆ. ಇವರೆಲ್ಲರ ಶ್ರಮ, ಮಂಡ್ಯ ಜನತೆಯ ಆಶೀರ್ವಾದದಿಂದ ಕೇಂದ್ರ ಸಚಿವನಾಗಿದ್ದೇನೆ. ಪ್ರಧಾನಿ ಮೋದಿ ನನಗೆ ಗುರುತರ ಜವಾಬ್ದಾರಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

ನನ್ನ ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಬಲ ತುಂಬಬೇಕಿದೆ. ಅದಕ್ಕೆ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ನಾಯಕರು, ಶಾಸಕರ ಜತೆ ಚರ್ಚೆ ಮಾಡಿದ್ದೇನೆ. ಸಾಮೂಹಿಕ ಜವಾಬ್ದಾರಿ ಮೂಲಕ ಸಂಘಟನೆಗೆ ಹೆಚ್ಚು ಶಕ್ತಿ ತುಂಬಲು ನಿರ್ಧಾರ ಮಾಡಲಾಗಿದೆ. ನಿಖಿಲ್ ಕುಮಾರಸ್ವಾಮಿ ಸಂಘಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ಎಲ್ಲರೂ ಸಲಹೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಫೋರ್, ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಶಾಸಕಾಂಗ ಪಕ್ಷದ ಉಪನಾಯಕಿ ಶಾರದಾ ಪೂರ್ಯ ನಾಯಕ್ ಸೇರಿದಂತೆ ಪಕ್ಷದ ಶಾಸಕರು, ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News