ರಾಜ್ಯಪಾಲರ ಕಚೇರಿ ಸಿಬ್ಬಂದಿಯ ತನಿಖೆಗೆ ಅನುಮತಿ ಕೋರಿದ್ದ ಐಜಿಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

Update: 2024-09-28 10:03 GMT

ಬೆಂಗಳೂರು: "ಸರಣಿ ಅಪರಾಧಗಳನ್ನು ಮಾಡಿರುವ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿಯೊಬ್ಬ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರಕಾರದ ಪೂರ್ಣ ಕೃಪಾಕಟಾಕ್ಷವಿದೆ" ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

"ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ ಎಂ.ಚಂದ್ರಶೇಖರ್ ಭ್ರಷ್ಟ ಅಧಿಕಾರಿ ಆಗಿದ್ದು, ಇಂತಹ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರಕಾರ ತನಿಖೆ ಮಾಡಿಸುತ್ತಿದೆ" ಎಂದು ಎಚ್‌ಡಿಕೆ ಗಂಭೀರ ಆರೋಪ ಮಾಡಿದರು.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಐಜಿಪಿ ಚಂದ್ರಶೇಖರ್ ವಿರುದ್ಧ ಸರಣಿ ದಾಖಲೆಗಳ ಸಮೇತ ಆರೋಪಗಳನ್ನು ಮಾಡಿದರು.

"ಸಿದ್ದರಾಮಯ್ಯ ಅವರ ಸರಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅದಕ್ಕೆ ಚಂದ್ರಶೇಖರ್ ಅವರಂತಹ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು" ಎಂದು ಕುಮಾರಸ್ವಾಮಿ ಅವರು ಹೇಳಿದರು.

ʼನನ್ನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಲೋಕಾಯುಕ್ತಕ್ಕೆ ಬರೆದಿದ್ದ ಅತಿ ಗೌಪ್ಯ ಪಾತ್ರವೊಂದು ಸೋರಿಕೆ ಆಗಿತ್ತು. ಅದು ನಮ್ಮ ಕುಟುಂಬದ ವಿರುದ್ಧ ಅನೇಕ ತಿಂಗಳಿನಿಂದ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವ ಖಾಸಗಿ ಸುದ್ದಿವಾಹಿನಿಗೆ ಆ ಪತ್ರ ಸೋರಿಕೆ ಆಗಿತ್ತು. ಅದು ಐಜಿಪಿ ಚಂದ್ರಶೇಖರ್ ಅವರಿಂದಲೇ ಸೋರಿಕೆ ಆಗಿದೆ. ಆದರೆ, ಅದೇ ಅಧಿಕಾರಿ ರಾಜ್ಯಪಾಲರ ಕಚೇರಿಯಿಂದಲೇ ಪತ್ರ ಸೋರಿಕೆ ಆಗಿದೆ ಎಂದು ಕಥೆ ಕಟ್ಟಿ ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಅನುಮತಿ ಕೊಡುವಂತೆ ಲೋಕಾಯುಕ್ತ ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸಂವಿಧಾನ ಮತ್ತು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯಪಾಲರ ಕಾರ್ಯಾಲಯದ ಬಗ್ಗೆ ತನಿಖೆಗೆ ಅನುಮತಿ ಕೋರುವ ದರ್ಪವನ್ನು ಈ ಅಧಿಕಾರಿ ತೋರಿಸಿದ್ದಾರೆʼ ಆಕ್ರೋಶ ವ್ಯಕ್ತಪಡಿಸಿದರು.

"ಮೊದಲೇ ಸರಣಿ ಅಪರಾಧಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿರುವ ಐಜಿಪಿ ಚಂದ್ರಶೇಖರ್ ಅವರಿಗೆ ರಾಜ್ಯ ಸರಕಾರ ಆಮಿಷಗಳನ್ನು ಒಡ್ಡಿ ಇಂತಹ ಕಾನೂನು ಬಾಹಿರ ಕೃತ್ಯ ಮಾಡಿಸುತ್ತಿದೆ. ಅವರಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಹುದ್ದೆಯ ಆಮಿಷ ಒಡ್ಡಲಾಗಿದೆ. ಈ ಸರಕಾರ ಒಬ್ಬರಿಗೆ ಈ ರೀತಿಯ ಆಮಿಷ ಒಡ್ಡಿಲ್ಲ. ಬಿ.ಕೆ.ಸಿಂಗ್, ಎಂ.ಚಂದ್ರಶೇಖರ್, ಗುಪ್ತದಳ ಮುಖ್ಯಸ್ಥರು ಸೇರಿದಂತೆ ಅನೇಕರಿಗೆ ಕಮಿಷನರ್ ಮಾಡುತ್ತೇವೆ ಎಂದು ಟೋಪಿ ಹಾಕಿದ್ದಾರೆ. ಇಂತಹ ಸರಕಾರದಲ್ಲಿ ತನಿಖೆಗಳು ಪಾರದರ್ಶಕವಾಗಿ ನಡೆಯುತ್ತವೆ ಎನ್ನುವ ನಂಬಿಕೆ ಇಲ್ಲ" ಎಂದು ಹೇಳದರು.

ʼಈ ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಕೇಡರ್ ನ ಐಪಿಎಸ್ ಅಧಿಕಾರಿ. 1998ರಲ್ಲಿ ಹಿಮಾಚಲ ಪ್ರದೇಶದ ಕೇಡರ್ ಆಗಿ ಆಯ್ಕೆಯಾಗಿದ್ದವರು. ಐದು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ಕರ್ನಾಟಕಕ್ಕೆ ಬಂದರು ಇವರು. ಈ ಅಧಿಕಾರಿ ಹಿಮಾಚಲ ಪ್ರದೇಶದಲ್ಲಿ ಹವಾಮಾನ ಸರಿಯಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಕರ್ನಾಟಕದಲ್ಲೇ ಅಧಿಕಾರದಲ್ಲಿ ಮುಂದುವರೆದಿದ್ದಾರೆʼ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

"ನಿಯೋಜನೆ ಮೇಲೆ ಬಂದ ಈ ವ್ಯಕ್ತಿ ಆಮೇಲೆ ಕರ್ನಾಟಕ ಕೇಡರ್ ಅಧಿಕಾರಿ ಆಗುತ್ತಾರೆ. ಅದಕ್ಕೆ ಏನೆಲ್ಲಾ ಅಕ್ರಮ ಎಸಗಿದರು? ಯಾರು ಯಾರ ನೆರವು ಪಡೆದುಕೊಂಡರು ಎನ್ನುವುದನ್ನು ನಾನು ಇಲ್ಲಿ ಹೇಳುವಂತಿಲ್ಲ. ಅದು ಬಹಳ ಸೂಕ್ಷ್ಮ ವಿಚಾರ" ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಐಜಿಪಿ ಚಂದ್ರಶೇಖರ್ ವಿರುದ್ಧ ಹಲವಾರು ದೂರುಗಳು ದಾಖಲಾಗಿ, ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ. ಈ ವ್ಯಕ್ತಿ ಸರಣಿ ಅಪರಾಧಗಳನ್ನು ಮಾಡಿರುವ ಅಧಿಕಾರಿ. ತಮ್ಮ ಅಧೀನದಲ್ಲಿದ್ದ ಅಧಿಕಾರಿಯಿಂದ ಭೂಮಿ ವ್ಯವಹಾರಕ್ಕೆ ಸಂಬಂಧಿಸಿ 20 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಇನ್ಸ್ಪೆಕ್ಟರ್ ಒಬ್ಬರು ದೂರು ನೀಡಿದ್ದು, ಆ ದಾಖಲೆಯನ್ನು ಕೂಡ ಕೇಂದ್ರ ಸಚಿವರು ಓದಿ ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಂಜುನಾಥ್, ಪಕ್ಷದ ಹಿರಿಯ ನಾಯಕರಾದ ಜಪ್ರುಲ್ಲಾ ಖಾನ್, ಸುಧಾಕರ ಶೆಟ್ಟಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣ :

ನಾನು ಬಹಳ ಕ್ಲೀನ್, ಪಾರದರ್ಶಕ, ನನ್ನ ಜೀವನ ತೆರೆದ ಪುಸ್ತಕ ಎಂದೆಲ್ಲಾ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ಕಥೆ ಏನಾಗಿದೆ? ಅವುಗಳ ತನಿಖೆ ಎಲ್ಲಿಗೆ ಬಂದಿದೆ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ? ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News