ಮುಡಾ ಹಗರಣ ಮುಚ್ಚಿ ಹಾಕಲು ಜಾತಿಗಣತಿ ನಾಟಕ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : "ಮುಡಾ ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕ ಆಡಲಾಗುತ್ತಿದೆ" ಎಂದು ಕೇಂದ್ರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸೋಮವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸರಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ, ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಈಗ ಮುಡಾ ಹಗರಣದಿಂದ ಜನರ ದಿಕ್ಕು ತಪ್ಪಿಸಲು ಜಾತಿಗಣತಿಯ ವಿಚಾರವನ್ನು ಮುನ್ನಲೆಗೆ ತಂದಿದೆ" ಎಂದು ಆರೋಪಿಸಿದರು.
ಚುನಾವಣೆಗೆ ಮೊದಲೇ ವರದಿ ಕೊಟ್ಟಿದ್ದರು :
ಕಾಂತರಾಜು ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಈಗ ಆ ವರದಿಗೆ 10 ವರ್ಷ ಆಗಿ ಹೋಗಿದೆ. 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ಹಳೆಯ ಜಾತಿಗಣತಿ ವರದಿಯನ್ನು ಇಷ್ಟು ದಿನ ಯಾಕೆ ಬಿಡುಗಡೆ ಮಾಡಿರಲಿಲ್ಲ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದರು.
ಕುಮಾರಸ್ವಾಮಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಬಿಡಲಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರ ಕೈಗೆ ಜಾತಿಗಣತಿ ವರದಿ ಕೊಡಲಾಗಿದೆ, ಅಲ್ಲವೇ? ಲೋಕಸಭೆ ಚುನಾವಣೆ ಮೊದಲೇ ವರದಿ ಪಡೆದರೂ ಇಷ್ಟು ದಿನಗಳವರೆಗೂ ಅದರ ಬಗ್ಗೆ ಸದ್ದೇ ಇರಲಿಲ್ಲ, ಯಾಕೆ? ಎಂದು ಪ್ರಶ್ನಿಸಿದರು.
ಮುಡಾ ಅಕ್ರಮದಿಂದ ರಕ್ಷಣೆ ಪಡೆಯಲು ಯತ್ನ:
"ಮುಡಾ ಹಗರಣದ ಹಿನ್ನಲೆಯಲ್ಲಿ ಜನರನ್ನು ದಾರಿ ತಪ್ಪಿಸಲು ಮತ್ತು ಜಾತಿಗಣತಿ ವರದಿ ಇಟ್ಟುಕೊಂಡು ಮುಡಾ ಅಕ್ರಮದಿಂದ ರಕ್ಷಣೆ ಪಡೆಯುವ ಕೆಲಸಕ್ಕೆ ಹೊರಟಿದ್ದಾರೆ. 10 ವರ್ಷಗಳ ಹಿಂದೆ ಮಾಡಿರುವ ಈ ಜಾತಿಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೆ ಅನುಕೂಲಗಳು ಆಗುವುದಿಲ್ಲ. ಮುಡಾ ಹಗರಣವನ್ನು ಮರೆಮಾಚಿಕೊಳ್ಳಲು ಈಗ ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಇಷ್ಟು ದಿನ ಇಲ್ಲದೇ ಇರೋದು ಈಗ ಯಾಕೆ ಮುನ್ನಲೆಗೆ ತರಲು ಹೊರಟಿದ್ದಾರೆ" ಎಂದು ನೇರ ಆರೋಪ ಮಾಡಿದರು.
ಜಾತಿ ಗಣತಿ ವರದಿ ಇಟ್ಟುಕೊಂಡು ಚುನಾವಣೆಗೆ ಹೋಗಿ :
ಜಾತಿಗಣತಿ ವರದಿ ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ, ಈ ವಿಷಯ ಇಟ್ಟುಕೊಂಡು ಚುನಾವಣೆ ಹೋಗಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಕುಮಾರಸ್ವಾಮಿ ಅವರು, ಸರಕಾರ ಹೋದರೆ ಹೋಗಲಿ ಎನ್ನುವ ಬದಲಿಗೆ ಮುಕ್ತವಾಗಿ ಘೋಷಣೆ ಮಾಡಿ ಚುನಾವಣೆಗೆ ಹೋಗಲಿ ಎಂದರು.