2047ಕ್ಕೆ ವಿಕಸಿತ ಭಾರತ್ ಗುರಿ | ಉದ್ಯೋಗ ಸೃಷ್ಟಿಗೆ ಹೆಚ್ಚು ಉತ್ತೇಜನ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಕೇಂದ್ರ ಸರಕಾರವು 2047ಕ್ಕೆ ವಿಕಸಿತ ಭಾರತ್ ಗುರಿಯನ್ನು ಮುಟ್ಟಬೇಕು ಎನ್ನುವ ಛಲದೊಂದಿಗೆ ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಹೆಚ್ಚು ಉತ್ತೇಜನ ಕೊಡುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 2ನೆ ಹಂತದ ಪ್ರಧಾನಮಂತ್ರಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್, ಉತ್ಪಾದನಾ ಸಂಪರ್ಕ ಉತ್ತೇಜನ ಯೋಜನೆ ಪರಿಕಲ್ಪನೆಗಳ ಅಡಿಯಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ಕೊಡುತ್ತಿದೆ. ಭಾರತವನ್ನು ಮೂರನೆ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಇದು ಸಹಕಾರಿ ಆಗುತ್ತದೆ ಎಂದರು.
ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಮೋದಿ ನೇತೃತ್ವದ ಕೇಂದ್ರ ಸರಕಾರ ಹೆಚ್ಚು ಒತ್ತು ನೀಡುತ್ತಿದೆ. ಬಜೆಟ್‍ನಲ್ಲಿ ಯುವಜನರಲ್ಲಿ ಕುಶಲತೆ ವೃದ್ಧಿಗೆ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಈ ಹಣವೂ ನೇರವಾಗಿ ಎಂಎಸ್‍ಎಂಇಗಳಿಗೆ ನೇರವಾಗಿ ಬಿಡುಗಡೆ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.