ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಡತಕ್ಕೆ ಸಹಿ ಹಾಕಲು ಲಂಚ ಪಡೆಯುತ್ತಿದ್ದರು: ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪ
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಕಡತಕ್ಕೆ ಸಹಿ ಹಾಕಲು ಲಂಚ ಪಡೆಯುತ್ತಿದ್ದ ವಿಷಯ ನನಗೆ ಗೊತ್ತಿದೆ. ಈ ಬಗ್ಗೆ ಯಾವಾಗ ಬೇಕಾದರೂ ಸಾಕ್ಷಿ ಸಮೇತ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಆಗಿದ್ದಾಗ ಕಡತಗಳಿಗೆ ಸಹಿ ಹಾಕಲು ಹಣ ನೀಡುವಂತೆ ಬಲವಂತ ಮಾಡಿಲ್ಲ. ನನ್ನದು ಶುದ್ಧಹಸ್ತ' ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸಂಬಂಧ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ನನ್ನ ಬಳಿ ದಾಖಲೆ, ಸಾಕ್ಷಿಗಳಿವೆ. ಕುಮಾರಸ್ವಾಮಿಯವರು ಸುಳ್ಳಿನ ಕತೆ ಕಟ್ಟುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಆದವರು ವಿಧಾನಸೌಧದಲ್ಲಿನ ಕಚೇರಿ ಅಥವಾ ಗೃಹ ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕಬೇಕು. ಅದನ್ನು ಬಿಟ್ಟು ಹೋಟೆಲ್‍ನಲ್ಲಿ ಕುಳಿತುಕೊಂಡಲ್ಲ. ಅಷ್ಟಕ್ಕೂ ಮುಖ್ಯಮಂತ್ರಿ ಆಗಿದ್ದಾಗ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ತಾಜ್‍ವೆಸ್ಟೆಂಡ್ ಹೋಟೆಲ್‍ನಲ್ಲಿ ಏಕೆ ವಾಸ್ತವ್ಯ ಹೂಡಿದ್ದರು ಎಂದು ಅವರು ಪ್ರಶ್ನಿಸಿದರು.
ಕಡತಗಳಿಗೆ ಸಹಿ ಹಾಕುವ ಮುನ್ನ ವ್ಯವಹಾರ ಕುದುರಿಸುವ ಉದ್ದೇಶದಿಂದಲೇ ಎಚ್.ಡಿ.ಕುಮಾರಸ್ವಾಮಿಯವರು ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ತಾಜ್‍ವೆಸ್ಟೆಂಡ್ ಹೋಟೆಲ್‍ನಲ್ಲಿ ಅವರ ಕಾರ್ಯವೈಖರಿ ಹೇಗಿತ್ತು, ಅಲ್ಲಿ ಯಾಕೆ ವಾಸ್ತವ್ಯ ಹೂಡಿದ್ದರು? ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಯಾರೆಲ್ಲ ಬಂದು ಹೋಗುತ್ತಿದ್ದರು? ಇನ್ನೂ ಮುಂತಾದ ರಹಸ್ಯ ಸೇರಿದಂತೆ ಎಲ್ಲವೂ ಗೊತ್ತಿದೆ ಎಂದು ಬಾಲಕೃಷ್ಣ ತಿಳಿಸಿದರು.