ಹೆಚ್‌ಡಿಕೆ ದಂಡ ಕಟ್ಟಿದ್ದಾರೆ ; ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ : ಸಂಸದ ಪ್ರಜ್ವಲ್ ರೇವಣ್ಣ

Update: 2023-11-21 12:37 GMT

ಸಂಸದ ಪ್ರಜ್ವಲ್ ರೇವಣ್ಣ 

 ಹಾಸನ: ನ,20: ಯಾರೋ ಮಾಡಿದ ತಪ್ಪಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸುವ ಮೂಲಕ ದಂಡ ಪಾವತಿ ಮಾಡಿದ್ದು, ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.

ನಗರದ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕರೆಂಟ್ ಕಳ್ಳ ಪೋಸ್ಟರ್ ಅಂಟಿಸಿದ್ದು ಸರಿಯಲ್ಲ. ಎರಡು ಬಾರಿ ಮುಖ್ಯಮಂತ್ರಿ ಆದವರನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು ಎಂದರು.

ಸಣ್ಣ ವಿಚಾರವನ್ನು ಇಷ್ಟೊಂದು ದೊಡ್ಡದು ಮಾಡಿದ್ದಕ್ಕೆ ಸ್ವತಃ ಕಾಂಗ್ರೆಸ್‌ ನವರೇ ಬೇಸರಗೊಂಡಿದ್ದಾರೆ .ಸಿಲ್ಲಿ ವಿಚಾರ ಮುಂದಿಟ್ಟು, ಮಾಜಿ ಸಿಎಂನ ಟೀಕೆ ಮಾಡೋದು ತಪ್ಪು ಅಂತಿದ್ದಾರೆ. ಕುಮಾರಸ್ವಾಮಿ ಅವರಿಗೆ 2 ಸಾವಿರ ಬಿಲ್ ಕಟ್ಟಲು ಯೋಗ್ಯತೆ ಇಲ್ಲ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಇವರು ಲೂಟಿ ಮಾಡಿರುವ ಭೂಮಿ ಬಗ್ಗೆ ತನಿಖೆ ಮಾಡಿದ್ರೆ ಅದಕ್ಕೆ ದಂಡ ಯಾರು ಕಟ್ಟುತ್ತಾರೆ ಎಂದು ಪ್ರಶ್ನಿಸಿದರು. ರೈತರನ್ನು ಕಳ್ಳರು ಅಂತೀರಾ! ಎಷ್ಟು ರೈತರು ಈ ರೀತಿ ಸಂಪರ್ಕ ಪಡೆದುಕೊಂಡಿರುತ್ತಾರೆ. ಅವರಿಂದ ದಂಡ ಪಡೆದು ಸುಮ್ಮನಾಗಲ್ವಾ, ನೀವು ರೈತರಿಗೆ ಕೊಡಬೇಕಾದ ಟಿಸಿಗಳನ್ನು ಸರಿಯಾಗಿ ಕೊಡಿ. ಹಾಸನ ಜಿಲ್ಲೆಯೊಂದರಕ್ಕೇ 27 ಸಾವಿರ ಟಿಸಿ ಬೇಕು ಎಂದು ರೈತರು ಹಣ ಕಟ್ಟಿದ್ದಾರೆ. ಟಿಸಿ ಕೊಡದಿದ್ದಕ್ಕೆ ಅವರು ಬೇರೆಡೆಯಿಂದ ಸಂಪರ್ಕ ತೆಗೆದುಕೊಂಡರೆ ಅವರನ್ನು ಕರೆಂಟ್ ಕಳ್ಳ ಅಂತೀರಾ ಎಂದರು. ರೈತರು ಹಣ ಕಟ್ಟಿದರೂ ಟಿಸಿ ಕೊಟ್ಟಿಲ್ಲ, ನೀವು ರೈತರ ಹಣ ತಿಂದಿದ್ದೀರಲ್ಲಾ ನೀವು ಎಂತಾ ಕಳ್ಳರು ಎಂದು ಪ್ರಶ್ನಿಸಿದರು.

ತಮ್ಮ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಾಯಕರ ವಾಗ್ದಾಳಿಗೆ ತಿರುಗೇಟು ನೀಡಿದ ಪ್ರಜ್ವಲ್, ಚುನಾವಣೆ ಬಂದಿದೆ ಅದಕ್ಕೆ ಬಿಳಿ ಬಟ್ಟೆ ಹಾಕಿಕೊಂಡು ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಸೋತು ಸುಮ್ಮನಾಗುತ್ತಾರೆ ಎಂದು ಹೇಳಿದರು. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ. ಖಂಡಿತಾ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಇದೆ ವೇಳೆ ವಿಶ್ವಾಸವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News