ಹಂಪಿಯಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸರಕಾರಕ್ಕೆ ಹೈಕೋರ್ಟ್ ಸಲಹೆ

Update: 2023-11-21 15:36 GMT

ಬೆಂಗಳೂರು : ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕರ್ನಾಟಕ ಹಿಂದುಳಿದಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಉತ್ತಮಗೊಳಿಸುವಂತೆ ಸರಕಾರಕ್ಕೆ ಸಲಹೆ ನೀಡಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಸುತ್ತಮುತ್ತಲಿನ ಸಂರಕ್ಷಿತ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡಗಳ ತೆರವು ಸಂಬಂಧ 2016ರಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಮೌಖಿಕವಾಗಿ ಈ ಸಲಹೆ ನೀಡಿದೆ.

ಅಲ್ಲದೇ, ಪ್ರವಾಸಿ ತಾಣಗಳಲ್ಲಿ ಉತ್ತಮ ಮೂಲಸೌಕರ್ಯ ವೃದ್ಧಿಯಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಿಂದ ಸರಕಾರಕ್ಕೆ ಆದಾಯವೂ ವೃದ್ಧಿಯಾಗಲಿದೆ. ಹೀಗಾಗಿ, ಈ ಸಲಹೆಯನ್ನು ಸರಕಾರಕ್ಕೆ ತಲುಪಿಸಬೇಕು ಎಂದು ರಾಜ್ಯ ಅಡ್ವೊಕೇಟ್ ಜನರಲ್‌ ಗೆ ಸೂಚನೆ ನೀಡಿದೆ.

ಅಲ್ಲದೇ, ಕರ್ನಾಟಕ 1990ರ ದಶಕದಲ್ಲಿ ಪ್ರವಾಸೋದ್ಯಮದಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು. ಇದೀಗ ಬಹುಶಃ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿರಬೇಕು. ಐತಿಹಾಸಿಕ ಹಂಪಿಯಲ್ಲಿ ಸದ್ಯ ಇರುವ ಮೂಲ ಸೌಕರ್ಯ ಪ್ರವಾಸಿಗರಿಗೆ ಸಾಲುತ್ತಿಲ್ಲ, ಅಲ್ಲಿನ ಮೂಲಸೌಕರ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉನ್ನತೀಕರಿಸಬೇಕಿದೆ. ಈ ಮೂಲಸೌಕರ್ಯ ಕೊರತೆ ಸಮಸ್ಯೆ ಬಗ್ಗೆ ಸರಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಪೀಠ ತಿಳಿಸಿತು.

ವಿಶ್ವ ಪಾರಂಪರಿಕ ತಾಣಗಳಲ್ಲಿ ಮೂಲಸೌಕರ್ಯ ವೃದ್ಧಿ ಸಂಬಂಧ ಸರಕಾರ ಸದಾ ತಜ್ಞರ ಜತೆ ಸಮಾಲೋಚನೆ ನಡೆಸುತ್ತಿರಬೇಕಾಗುತ್ತದೆ. ಸಣ್ಣ ರಾಷ್ಟ್ರಗಳೂ ಸಹ ತಮ್ಮ ಬಜೆಟ್‌ ನಲ್ಲಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಮೀಸಲಿರಿಸುತ್ತವೆ. ಹಲವು ದೇಶಗಳು ಆದಾಯಕ್ಕೆ ಪ್ರವಾಸಿ ತಾಣಗಳನ್ನೇ ನೆಚ್ಚಿಕೊಂಡಿದೆ ಎಂದು ತಿಳಿಸಿದ ನ್ಯಾಯಪೀಠ, ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಪ್ರವಾಸಿ ತಾಣಗಳಿದ್ದು, ಅವುಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ಅತ್ಯುತ್ತಮ ಪದ್ಧತಿಗಳನ್ನು ಸರಕಾರ ರೂಢಿಸಿಕೊಳ್ಳಬೇಕು.

ಈ ರೀತಿ ಪ್ರವಾಸಿ ಸ್ಥಳಗಳಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ನೀಡಿದರೆ ಹೆಚ್ಚಿನ ಜನರು ಆ ತಾಣಗಳಿಗೆ ಭೇಟಿ ನೀಡುತ್ತಾರೆ, ಆಗ ಸಹಜವಾಗಿಯೇ ಆದಾಯ ಹೆಚ್ಚುತ್ತದೆ ಎಂದು ಪೀಠ ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News