ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಧಾರವಾಡಕ್ಕೆ ತೆರಳಿ ಮತ ಚಲಾಯಿಸಲು ಹೈಕೋರ್ಟ್ ಅನುಮತಿ
ಬೆಂಗಳೂರು : ಇಂದು ನಡೆಯುತ್ತಿರುವ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕೆ ಧಾರವಾಡ ಪ್ರವೇಶಿಸಲು ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾದ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಅನುಮತಿ ನೀಡಿದೆ.
ವಿನಯ್ ಕುಲಕರ್ಣಿ ಅವರು ನೇರವಾಗಿ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿ ನಂತರ ನೇರವಾಗಿ ಧಾರವಾಡ ಜಿಲ್ಲೆ ಬಿಟ್ಟು ಹೋಗಬೇಕು ಎಂದು ನ್ಯಾಯಮೂರ್ತಿ ಎಂ.ಜಿ. ಉಮಾ ನಿರ್ದೇಶಿಸಿದ್ದಾರೆ. ಧಾರವಾಡ ಜಿಲ್ಲಾ ಪ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಕೊಲೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ವಿನಯ್ ಕುಲಕರ್ಣಿಗೆ ಸುಪ್ರೀ ಕೋರ್ಟ್ ಜಾಮೀನು ನೀಡಿತ್ತು. ಆದರೆ, ಧಾರವಾಡ ಜಿಲ್ಲೆ ಪ್ರವೇಶ ಮಾಡಬಾರದು ಎಂದು ಷರತ್ತು ವಿಧಿಸಿತ್ತು. ಇದರಿಂದ ಮತದಾನ ಮಾಡಲು ಧಾರವಾಡ ಜಿಲ್ಲೆ ಪ್ರವೇಶ ಮಾಡಲು ಅನುಮತಿ ನೀಡುವಂತೆ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ತಿರಸ್ಕರಿಸಿತ್ತು. ಹಾಗಾಗಿ, ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಮತ ಚಲಾಯಿಸಿ ಮತದಾನ ಕೇಂದ್ರದಿಂದ ತೆರಳಬೇಕು. ಧಾರವಾಡ ಜಿಲ್ಲೆ ಬಿಟ್ಟು ಹೊರಗೆ ಹೋಗಬೇಕು. ಈ ವೇಳೆ ಯಾವುದೇ ಸಮಸ್ಯೆ ಸೃಷ್ಟಿಸಬಾರದು ಎಂದು ಮೌಖಿಕವಾಗಿ ವಿನಯ್ ಕುಲಕರ್ಣಿಗೆ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.