ಅನುಮತಿ ಇಲ್ಲದೆ ಕಲಾಪಗಳ ವೀಡಿಯೊ ಬಳಕೆಗೆ ಹೈಕೋರ್ಟ್ ನಿರ್ಬಂಧ

Update: 2024-09-20 14:08 GMT

ಬೆಂಗಳೂರು : ನ್ಯಾಯಾಲಯದ ಕಲಾಪದ ಕೆಲವು ವೀಡಿಯೊಗಳು ವೈರಲ್‌ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌, ಪೂರ್ವಾನುಮತಿ ಪಡೆಯದೇ ವೀಡಿಯೊ ರೆಕಾರ್ಡಿಂಗ್‌, ಹಂಚಿಕೆ ಮಾಡದಂತೆ ವೀಕ್ಷಕರಿಗೆ ಎಚ್ಚರಿಸಿ ಲೈವ್‌ ಸ್ಟ್ರೀಮಿಂಗ್‌ಗೂ ಮುನ್ನ ಸಂದೇಶ ಹಾಕಲಾರಂಭಿಸಿದೆ.

ಹೈಕೋರ್ಟ್‌ 2022ರ ಜ.1ರಿಂದ ʼಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು- 2021ʼ ಅನ್ನು ಜಾರಿಗೊಳಿಸಿದೆ. ಕಾಯ್ದೆ ಲೈವ್‌ ಸ್ಟ್ರೀಮಿಂಗ್‌ ಹಾಗೂ ರೆಕಾರ್ಡಿಂಗ್‌ ನಿಯಮಗಳನ್ನು ಅಳವಡಿಸಲಾಗಿದೆ. ಈ ಸಂಬಂಧದ ನೋಟಿಸ್‌ ಅನ್ನು ಪ್ರತಿಯೊಂದು ಕೋರ್ಟ್‌ ಹಾಲ್‌ಗಳ ವೀಡಿಯೊ ಕಾನ್ಫರೆನ್ಸ್‌ ಪರದೆಯ ಮೇಲೆ ಕಲಾಪ ಆರಂಭಕ್ಕೂ ಮುನ್ನ ಮತ್ತು ಮಧ್ಯಾಹ್ನ ಭೋಜನದ ವೇಳೆಯಲ್ಲಿ ಪ್ರಸಾರ ಮಾಡಲಾಗಿದೆ. ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆ ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ (ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು) ಕಲಾಪದ ಲೈವ್‌ ಸ್ಟ್ರೀಮಿಂಗ್‌ ಅಥವಾ ಹೈಕೋರ್ಟ್‌ ಯೂಟ್ಯೂಬ್‌ ಚಾನಲ್‌ನಲ್ಲಿನ ವೀಡಿಯೊಗಳನ್ನು ರೆಕಾರ್ಡ್‌ ಮಾಡುವುದಾಗಲಿ, ಪ್ರಸರಣ ಮಾಡುವುದಾಗಲಿ ಮಾಡುವಂತಿಲ್ಲ ಎಂದು ಸಂದೇಶದಲ್ಲಿ ಹೇಳಲಾಗಿದೆ.

ಈ ನಿರ್ಬಂಧವು ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪೂರ್ವಾನುಮತಿ ಪಡೆಯದೇ ಲೈವ್‌ ಸ್ಟ್ರೀಮಿಂಗ್‌ನ ಮರು ಪ್ರಸಾರ, ವರ್ಗಾವಣೆ, ಅಪ್‌ಲೋಡ್‌ ಮಾಡುವುದು, ಪೋಸ್ಟ್‌ ಮಾಡುವುದು, ಮಾರ್ಪಾಡು ಮಾಡುವುದು ಪ್ರಸಾರ ಅಥವಾ ಮರು ಪ್ರಸಾರವನ್ನು ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಕಲಾಪವನ್ನು ರೆಕಾರ್ಡ್‌ ಮಾಡಲು ಅಥವಾ ಅದರ ನಿರೂಪಣೆಗೆ ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗಿಲ್ಲ. ನ್ಯಾಯಾಲಯದ ನಿಯಮ ಉಲ್ಲಂಘಿಸಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುತ್ತದೆ. ನ್ಯಾಯಾಲಯದ ಕಲಾಪದ ರೆಕಾರ್ಡಿಂಗ್‌ ಮತ್ತು ಆರ್ಕೈವ್‌ ದತ್ತಾಂಶದ ಮೇಲೆ ನ್ಯಾಯಾಲಯಕ್ಕೆ ವಿಶೇಷ ಹಕ್ಕುಸ್ವಾಮ್ಯವಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಮತ್ತು ಮಹಿಳಾ ವಕೀಲೆಯೊಬ್ಬರ ಜೊತೆ ಲಘುವಾಗಿ ಮಾತನಾಡಿದ ವೀಡಿಯೊ ಕ್ಲಿಪ್‌ಗಳು ರಾಷ್ಟ್ರಾದ್ಯಂತ ಚರ್ಚೆಗೀಡಾದ ಬೆನ್ನಿಗೇ ನ್ಯಾಯಾಲಯವು ನೋಟಿಸ್‌ ಮೂಲಕ ಎಚ್ಚರಿಕೆ ನೀಡಲಾರಂಭಿಸಿದೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News