ಸಾಕ್ಷಿಗೆ ಎಂದು ತಿಳಿಸಿ ಆಸ್ತಿ ಪತ್ರಕ್ಕೆ ಸಹಿ: ದಾವೆ ರದ್ದತಿಗೆ ಹೈಕೋರ್ಟ್ ನಕಾರ

Update: 2023-06-25 16:35 GMT

ಬೆಂಗಳೂರು, ಜೂ.25: ಸಾಕ್ಷಿಗೆಂದು ಕರೆದು ಆಸ್ತಿ ಪತ್ರಗಳಿಗೆ ಸಹಿ ಹಾಕಿಸಿಕೊಂಡ ಆರೋಪ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ಸಹೋದರಿಯೊಬ್ಬರು ತನ್ನ ಮೂವರು ಸಹೋದರರ ವಿರುದ್ಧ ದಾಖಲಿಸಿದ್ದ ಅಸಲು ದಾವೆಯನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ದಾವೆಗೆ ಸಂಬಂಧಿಸಿದಂತೆ ವಿಚಾರಣೆ ನಡೆದು ಸತ್ಯಾಂಶ ಹೊರಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಬೆಂಗಳೂರಿನ ನಿವಾಸಿಗಳಾದ ಜಿ.ಎಸ್.ಮಹೇಂದ್ರ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಸಹೋದರರು ತಪ್ಪಾಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಮೋಸ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಹೀಗಾಗಿ, ವಿಚಾರಣೆ ಮುಂದುವರೆಸಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿಯ ಎಲ್ಲ ಪುಟಕ್ಕೆ ಸಹಿ ಹಾಕಬೇಕು ಎಂಬ ಅಂಶ ಸರಿಯಿದ್ದರೂ, ಪರಿಶೀಲನಾ ಪುಟ ಮತ್ತು ಅಫಿಡವಿಟ್‍ಗೆ ಸಹಿ ಮಾಡಿದ್ದಾರೆ. ಎಲ್ಲ ಪುಟಕ್ಕೆ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ಅರ್ಜಿ ವಜಾಗೊಳಿಸಲು ಅರ್ಹವಲ್ಲ ಎಂದು ಪೀಠ ತಿಳಿಸಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ದಾವೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದೆ.

ಅಲ್ಲದೆ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ. ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸುವ ಅಗತ್ಯ ಕಂಡು ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸಿವಿಲ್ ದಾವೆ ವಿಚಾರಣೆ ಮುಂದುವರೆಯಬೇಕಾಗಿದ್ದು, ಸತ್ಯಾಂಶ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?: ಆಸ್ಟ್ರೇಲಿಯಾ ದೇಶದಲ್ಲಿ ನೆಲೆಗೊಂಡಿರುವ ಕೋಮಲಾ ಎಂಬುವರು, ತಮ್ಮ ಪತಿ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸಹೋದರರು ಪ್ರಕರಣವೊಂದರ ಸಾಕ್ಷಿಗೆಂದು ಉಪನೋಂದಣಿ ಕಚೇರಿಯಲ್ಲಿ ಸಹಿ ಪಡೆದುಕೊಂಡಿದ್ದರು. ಇದಾದ ಬಳಿಕ ಆಸ್ತಿಯ ಹಕ್ಕನ್ನು ಬಿಟ್ಟು ಕೊಟ್ಟಿರುವುದಾಗಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಮಲಾ ಅವರು ಸಹೋದರರಾದ ಮಹೇಂದ್ರ, ರವೀಂದ್ರ ಮತ್ತು ಜ್ಞಾನೇಂದ್ರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಅಸಲು ದಾವೆ ಹೂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News