ಮೆಗಾಸಿಟಿ ಹಗರಣ: ಸಿ.ಪಿ.ಯೋಗೇಶ್ವರ್ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ

Update: 2023-07-30 16:02 GMT

ಬೆಂಗಳೂರು: ಮೆಗಾಸಿಟಿ ವಂಚನೆ ಆರೋಪ ಸಂಬಂಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಯೋಗೇಶ್ವರ್ ಮತ್ತು ಅವರ ಕುಟುಂಬದವರು ವಿಚಾರಣೆ ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಕೇಂದ್ರ ಸರಕಾರದ ಗಂಭೀರ ಅಪರಾಧಗಳ ತನಿಖಾ ಇಲಾಖೆ(ಎಸ್‍ಎಫ್‍ಐಒ) ದಾಖಲಿಸಿದ್ದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಯೋಗೇಶ್ವರ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.

ಆರೋಪ ಸಂಬಂಧ ಈಗಾಗಲೇ ಎಸ್‍ಎಫ್‍ಐಒ ಪ್ರಕರಣ ದಾಖಲಿಸಿ ಅದು ವಿಚಾರಣೆ ಹಂತದಲ್ಲಿದೆ. ಹೀಗಾಗಿ, ಈ ಹಂತರದಲ್ಲಿ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: 2009ರಲ್ಲಿ ಮೆಗಾಸಿಟಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಲಿಮಿಟೆಡ್ ಹೆಸರಿನಲ್ಲಿ ಯೋಗೇಶ್ವರ್ ದೊಡ್ಡ ಟೌನ್ ಶಿಪ್‍ಗಳನ್ನು ನಿರ್ಮಾಣ ಮಾಡಿದ್ದರು. ಅದರಲ್ಲಿ ನಿವೇಶನಗಳನ್ನು ನೀಡುವುದಾಗಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಆನಂತರ ಅವರಿಗೆ ನಿವೇಶನವನ್ನೂ ನೀಡಿಲ್ಲ, ಸಾರ್ವಜನಿಕ ಹಣವನ್ನೂ ವಾಪಸ್ ನೀಡಿಲ್ಲ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಿದ್ದ ಅಪರಾಧಗಳ ತನಿಖಾ ಇಲಾಖೆ ಯೋಗೇಶ್ವರ್ ಮತ್ತು ಅವರ ಕುಟುಂಬದವರ ವಿರುದ್ಧ 2012ರಲ್ಲಿ ವಂಚನೆ, ಕ್ರಿಮಿನಲ್ ಪಿತೂರಿ ಸೇರಿ ಆರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿತ್ತು.

ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಕೋರಿ ಯೋಗೇಶ್ವರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಅರ್ಜಿಗಳನ್ನು ವಜಾಗೊಳಿಸಿರುವ ಕಾರಣ ಯೋಗೇಶ್ವರ್ ಪ್ರಕರಣದ ವಿಚಾರಣೆ ಎದುರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News