ಚುನಾವಣಾ ತಕರಾರು ಅರ್ಜಿ ವಜಾಗೊಳಿಸಲು ಹೈಕೋರ್ಟ್ ನಕಾರ; ಕಾಂಗ್ರೆಸ್ ಶಾಸಕ ಎನ್.ಎ.ಹಾರಿಸ್‌ಗೆ ಸಂಕಷ್ಟ
ಬೆಂಗಳೂರು: ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ.ಹಾರಿಸ್ ವಿರುದ್ಧದ ಚುನಾವಣಾ ತಕರಾರು ಅರ್ಜಿ ವಜಾಗೊಳಿಸಲು ಹೈಕೋರ್ಟ್ ನಿರಾಕರಿಸಿದೆ ಎಂದು ವರದಿಯಾಗಿದೆ.
ಶಾಂತಿನಗರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಶಿವಕುಮಾರ್ ಅವರು ಶಾಸಕ ಸ್ಥಾನದಿಂದ ಎನ್.ಎ.ಹಾರಿಸ್ ಆಯ್ಕೆ ಅಸಿಂಧುಗೊಳಿಸಲು ಕೋರಿ ಅರ್ಜಿ ಸಲ್ಲಿಸಿದ್ದರು.
ಎನ್.ಎ.ಹಾರಿಸ್ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜಯಿ ಎಂದು ಘೋಷಿಸಲು ಕೆ.ಶಿವಕುಮಾರ್ ಮನವಿಗೆ ಸೂಕ್ತ ಕಾರಣಗಳನ್ನು ನೀಡಿರಲಿಲ್ಲ. ಹೀಗಾಗಿ ಚುನಾವಣಾ ತಕರಾರು ಅರ್ಜಿ ವಜಾಗೊಳಿಸಲು ಶಾಸಕ ಎನ್.ಎ.ಹಾರಿಸ್ ಮನವಿ ಮಾಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ನ ಏಕಸದಸ್ಯ ಪೀಠ, ಕಾಂಗ್ರೆಸ್ ಶಾಸಕ ಎನ್.ಎ.ಹಾರಿಸ್ ಸಲ್ಲಿಸಿದ್ದ ಆಕ್ಷೇಪಣೆಯನ್ನು ತಿರಸ್ಕರಿಸಿದೆ.
ಇದೀಗ ಎನ್.ಎ.ಹಾರಿಸ್ ಆಕ್ಷೇಪಣೆ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿರುವ ಹೈಕೋರ್ಟ್, ಚುನಾವಣಾ ತಕರಾರು ಅರ್ಜಿ ವಿಚಾರಣೆ ಮುಂದುವರಿಸಲು ತೀರ್ಮಾನ ಮಾಡಿದೆ ಎಂದು ತಿಳಿದುಬಂದಿದೆ.