ʼಜಾತಿಗಣತಿʼ ವರದಿ ಜಾರಿ ವಿಪಕ್ಷಕ್ಕೆ ನುಂಗಲಾರದ ತುತ್ತಾಗಿದೆ : ಗೃಹ ಸಚಿವ ಜಿ.ಪರಮೇಶ್ವರ್

Update: 2024-10-08 10:23 GMT

ಬೆಂಗಳೂರು : "ಜಾತಿಗಣತಿ ವರದಿಯನ್ನು ಜಾರಿಗೊಳಿಸಲು ಮುಂದಾಗಿರುವುದು ವಿಪಕ್ಷದವರಿಗೆ ನುಂಗಲಾರದ ತುತ್ತಾಗಿದೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನಾವು ಜಾತಿಗಣತಿಯ ವರದಿಯನ್ನು ತರದೇ ಇದ್ದಾಗ ಕೋಲ್ಡ್ ಸ್ಟೋರೆಜ್‌ನಲ್ಲಿಟ್ಟುಬಿಟ್ಟರು ಎಂದು ಟೀಕಿಸುತ್ತಿದ್ದರು. ಯಾಕೆ ಅಷ್ಟೊಂದು ಹಣ ಖರ್ಚು ಮಾಡಿದರು. ಯಾಕೆ ಪೆಟ್ಟಿಗೆಯೊಳಗೆ ಇಡಬೇಕಿತ್ತು ಎಂದೆಲ್ಲ‌ ಪ್ರಶ್ನಿಸಿದರು. ಆದರೆ ಜನಸಮುದಾಯಕ್ಕೆ ಜಾರಿಗೊಳಿಸುತ್ತೇವೆ ಎಂದಾಗ ನುಂಗಲಾರದ ತುತ್ತಾಗಿದೆ. ರಾಜ್ಯದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯದ ಜನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆʼ ಎಂದು ಹೇಳಿದರು.

ಜಾತಿಗಣತಿ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಎಲ್ಲರು ಹೇಳುತ್ತಿದ್ದಾರೆ. ಸಮುದಾಯಗಳಿಗೆ ಯೋಜನೆಗಳನ್ನು ನೀಡಬಾರದೇ? ಎಂದು ಅವರು ಪ್ರಶ್ನಿಸಿದರು.

ಯಾವ ಆಧಾರದ ಮೇಲೆ ಯೋಜನೆಗಳನ್ನು ಕೊಡಬೇಕು ಎಂಬ ಪ್ರಶ್ನೆ ಬಂದಾಗ ಸ್ವಾಭಾವಿಕವಾಗಿ ನಾವು ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಕೊಡಬೇಕಾಗುತ್ತದೆ. ಅದಕ್ಕೋಸ್ಕರ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು. ಅ.18ರಂದು ಸಚಿವ ಸಂಪುಟದ ಮುಂದೆ ಚರ್ಚೆಗೆ ತರುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಉಪಸಮಿತಿ ರಚಿಸುವುದಾ ಅಥವಾ ಸದನಕ್ಕೆ ತೆಗೆದುಕೊಂಡು ಹೋಗುವುದಾ ಎಂಬುದನ್ನು ತೀರ್ಮಾನ ಮಾಡುತ್ತಾರೆ. ಇದರಲ್ಲಿ ಯಾರ ಬೆಂಬಲದ ಪ್ರಶ್ನೆ ಬರುವುದಿಲ್ಲ. ವಸ್ತುಸ್ಥಿತಿಯನ್ನು ಜನರ ಮುಂದೆ ಇಡುತ್ತೇವೆ. ಅದನ್ನು ಬೇಡ ಅಂದರೆ ಹೇಗೆ? 160 ಕೋಟಿ ರೂ. ಖರ್ಚು ಮಾಡಿ, ಯಾವ ಸಮುದಾಯ ಎಷ್ಟು ಜನಸಂಖ್ಯೆ ಇದೆ ಎಂಬುದು ಗೊತ್ತಾಗಬೇಕು ಎಂದರು

ಕೇಂದ್ರ ಸರಕಾರ ಜನಗಣತಿ ಮಾಡಬೇಕು ಎಂದು ನಿರ್ಧರಿಸಿದ್ದು, ಈಗಾಗಲೇ ತಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಪ್ರಧಾನಮಂತ್ರಿ ಭೇಟಿಗೆ ಹೋದಾಗ ಜನಗಣತಿ ಮಾಡುವುದಾಗಿ ಹೇಳಿದ್ದರು. 2026 ಅಥವಾ 2027ರಲ್ಲಿ ಪ್ರಾರಂಭಿಸಿ, 2028 ಚುನಾವಣೆಗೆ ಸಿಗುತ್ತದೆ ಎಂದಿದ್ದರು. ಆ ಸಂದರ್ಭದಲ್ಲಿಯೂ ಇದೇ ರೀತಿ ವಿರೋಧಿಸುತ್ತಾರೆಯೇ? ಸರಕಾರ ಅಧಿಕೃತವಾಗಿ ಜಾತಿಗಣತಿ ಮಾಡಿದೆ. ಯಾರೋ ನಾಲ್ಕು ಜನ ಸೇರಿ ಮಾಡಿರುವುದಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ :

ಎರಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಬಹುಮತ ಬರಲಿದೆ ಎಂದು ಎಲ್ಲಾ ಸಮೀಕ್ಷೆಗಳು ಹೇಳಿವೆ.‌ ದೇಶದಲ್ಲಿ ಬಿಜೆಪಿಯನ್ನು ಯಾವ ರೀತಿ ತಿರಸ್ಕಾರ ಮಾಡುತ್ತಿದ್ದಾರೆ ಅನ್ನುವುದಕ್ಕೆ ಒಂದೊಂದು ರಾಜ್ಯದಲ್ಲಿ ಬದಲಾವಣೆಯಾದಾಗ ಗೊತ್ತಾಗುತ್ತಿದೆ. ಅದೇ ರೀತಿಯಾಗಿ ಮಹಾರಾಷ್ಟ್ರದಲ್ಲಿ ಕೂಡ ನಮ್ಮ ಪಕ್ಷದ ಸರಕಾರವನ್ನು ರಚಿಸುತ್ತೇವೆ ಎಂಬ ವಿಶ್ವಾಸವಿದೆ. ಬದಲಾವಣೆ ಪ್ರಾರಂಭವಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News