ಮಿಸ್ಟರ್ ಯತ್ನಾಳ್‌, ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ : ಝಮೀರ್‌ ಅಹ್ಮದ್

Update: 2024-10-07 17:38 GMT

ವಿಜಯಪುರ : "ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ, ಮಿಸ್ಟರ್ ಯತ್ನಾಳ್. ಅದು ದಾನಿಗಳು ಸಮುದಾಯಕ್ಕೆ ಕೊಟ್ಟಿರುವ ದಾನ" ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ವಕ್ಫ್ ಅದಾಲತ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ʼವಕ್ಫ್ ಆಸ್ತಿ ಸರಕಾರದಿಂದ ಪಡೆದಿಲ್ಲ, ಬದಲಿಗೆ ಸರಕಾರಿ ಸಂಸ್ಥೆಗಳೇ ವಕ್ಫ್ ಆಸ್ತಿ ಒತ್ತುವರಿ ಮಾಡಿವೆ. ಖಬರಸ್ಥಾನಕ್ಕೆ ಹೊರತು ಪಡಿಸಿ ವಕ್ಫ್ ಬೋರ್ಡ್‌ಗೆ ಸರಕಾರ ಜಮೀನು ಕೊಟ್ಟಿಲ್ಲ. ವ್ಯವಸ್ಥಿತ ವಾಗಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಹೋಗಬೇಡಿʼ ಎಂದು ತಿಳಿಸಿದರು.

ವಿಜಯಪುರದಲ್ಲಿ ಬೇರೆಯವರಿಗೆ ಸೇರಿದ ಆಸ್ತಿಗೆಲ್ಲಾ ಖಾತೆ ಮಾಡಿಸಿಕೊಳ್ಳಲು ಝಮೀರ್‌ ಬರುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವೇದಿಕೆಯಲ್ಲಿ ಮಾತನಾಡುತ್ತಾ ನೇರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, "ವಕ್ಫ್ ಆಸ್ತಿ ನಿಮ್ಮಪ್ಪನದ್ದೂ ಅಲ್ಲ, ನಮ್ಮಪ್ಪಂದೂ ಅಲ್ಲ. ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟ ದೇವರ ಆಸ್ತಿ" ಎಂದು ಹೇಳಿದರು.

ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಿ ಶಿಕ್ಷಣ ಮತ್ತು ಅರೋಗ್ಯ ಸೇವೆಗೆ ಬಳಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ವಕ್ಫ್ ಅದಾಲತ್ ಮಾಡಲಾಗುತ್ತಿದೆ. ವಿಜಯಪುರದಲ್ಲಿ 338 ಅರ್ಜಿ ಬಂದಿದ್ದು, ಅದರಲ್ಲಿ 17 ಒತ್ತುವರಿ, 81 ಖಾತೆ, 77 ಖಬರಸ್ಥಾನ, 25 ಸರ್ವೆ ಸೇರಿದಂತೆ ಇತರೆ ಸಮಸ್ಯೆಗಳಿಗೆ ಸಂಬಂಧ ಪಟ್ಟಿದ್ದು, ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಕಷ್ಟು ವಕ್ಫ್ ಆಸ್ತಿ ಒತ್ತುವರಿ ಆಗಿದ್ದು, ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ವಕ್ಫ್ ಆಸ್ತಿ ಸಂರಕ್ಷಣೆ ಮಾಡುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಮೌಲಾನಾ ತನ್ವೀರ್ ಹಾಶ್ಮಿ, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಶಾಸಕರಾದ ನಾಡಗೌಡ, ಅಶೋಕ್ ಮನಗೋಳಿ, ವಿಠಲ ಕಟಕ ದೊಂಡ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೌಸರ್ ನಿಯಾಝ್‌, ಮುಖಂಡ ಹಮೀದ್ ಮುಶ್ರಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News