ನಿಮ್ಮನ್ನೆ ಪದಚ್ಯುತಿಗೊಳಿಸಲು ಯತ್ನಿಸುತ್ತಿರುವ ಸ್ವಪಕ್ಷೀಯರ ರಾಜೀನಾಮೆ ಕೇಳಿದ್ದೀರಾ? : ವಿಜಯೇಂದ್ರ ವಿರುದ್ಧ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ನೀಡುತ್ತಾರೆಂದು ಪ್ರಶ್ನಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತಮ್ಮನ್ನು ಪದಚ್ಯುತಿಗೊಳಿಸಲು ಯತ್ನಿಸುತ್ತಿರುವ ಸ್ವಪಕ್ಷೀಯ ನಾಯಕರ ರಾಜೀನಾಮೆಯನ್ನು ಕೇಳಿದ್ದೀರಾ? ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಜಯಪುರ, ಬೆಳಗಾವಿ, ಬೆಂಗಳೂರು ಬಣಗಳು ದಿನನಿತ್ಯ ಚರ್ಚೆಗಳನ್ನು ಮಾಡಿ, ವಿಜಯೇಂದ್ರ ವಿರುದ್ಧವೇ ಗುರುತರ ಆರೋಪಗಳನ್ನು ಮಾಡಿ, ಅವರಿಂದ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಜಗಜ್ಜಾಹೀರಾಗಿದೆ ಎಂದು ಹೇಳಿದರು.
ವಿಜಯೇಂದ್ರ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು, ರಾಜ್ಯದ ಜನತೆಯ ಆಶೀರ್ವಾದದಿಂದ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ 136 ಜನ ಗೆದ್ದು, ರಚನೆಯಾಗಿರುವ ಸರಕಾರದ ನೇತೃತ್ವ ವಹಿಸಿರುವ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದರು.
ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿರುವ ಶಾಸಕ ಮುನಿರತ್ನ, ಹಲವಾರು ಗುರುತರ ಆರೋಪಗಳನ್ನು ಎದುರಿಸುತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ಸದಸ್ಯ ಸಿ.ಟಿ.ರವಿ, ಬಿ.ಎಸ್. ಯಡಿಯೂರಪ್ಪರ ರಾಜೀನಾಮೆಯನ್ನು ನೀವು ಕೇಳಿದ್ದೀರಾ? ನಮ್ಮ ಸರಕಾರವನ್ನು ತೆಗೆಯಲು ಸಾವಿರ ಕೋಟಿ ರೂ.ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ ಎಂದು ನಿಮ್ಮ ಪಕ್ಷದ ಶಾಸಕರು ಮಾಡಿರುವ ಆರೋಪದ ಕುರಿತು ತನಿಖೆ ಆಗ್ರಹ ಮಾಡಿದ್ದೀರಾ? ಎಂದು ಅವರು ಪ್ರಶ್ನಿಸಿದರು.
ನಿಮ್ಮ ಮಿತ್ರ ಪಕ್ಷ ಜೆಡಿಎಸ್‍ನ ಎಚ್.ಡಿ.ರೇವಣ್ಣ ಮೇಲೆ ಮಹಿಳೆ ಅಪಹರಣ ಸೇರಿದಂತೆ ಹಲವು ಗುರುತರ ಆರೋಪಗಳಿವೆ. ಅವರ ರಾಜೀನಾಮೆ ಕೇಳಿದ್ದೀರಾ? ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿಮ್ಮ ಬಗ್ಗೆ, ನಿಮ್ಮ ಪರಿವಾರದ ಬಗ್ಗೆ ಏನೆಲ್ಲಾ ಆಪಾದನೆಗಳನ್ನು ಮಾಡಿದ್ದಾರೆ. ಅದರ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೀರಾ?, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೀರಾ? ಎಂದು ಈಶ್ವರ್ ಖಂಡ್ರೆ ಕಿಡಿಗಾರಿದರು.
ನಿಮ್ಮ ತಟ್ಟೆಯಲ್ಲಿ ಕೋಣ ಬಿದ್ದಿದೆ. ನಮ್ಮಲ್ಲಿ ಏನೂ ಆಗಿಲ್ಲ. ಇಲ್ಲದೇ ಇರುವ ಪ್ರಕರಣವನ್ನು ಇಟ್ಟುಕೊಂಡು ರಾಜ್ಯದ ಅಭಿವೃದ್ಧಿ ಕುಂಠಿತವಾಗುವಂತೆ ಹೇಳಿಕೆಗಳನ್ನು ನೀಡುತ್ತಿದ್ದೀರಾ? ಆದರೆ, ಇದ್ಯಾವುದು ನಮ್ಮ ಸರಕಾರದ ಮೇಲೆ ಪ್ರಭಾವ ಬೀರುವುದಿಲ್ಲ. ವಿನಾಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯನ್ನು ಈ ಪ್ರಕರಣದಲ್ಲಿ ಎಳೆದು ತಂದಿರುವುದು ನೋಡಿದರೆ, ನೀವು ರಾಜಕೀಯ ಅಧಿಕಾರಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಾ ಎಂದು ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ನಾಲ್ಕು ವರ್ಷಗಳ ಅಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಮುಂದೆ ನಾವು ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗುತ್ತದೆ ಎಂದು ಗೊತ್ತಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಮುಡಾ ಪ್ರಕರಣದ ಸಂಚು ಮಾಡಿದ್ದಾರೆ. ಆದರೆ, ಈ ಕುತಂತ್ರಗಳು ಯಾವುದು ನಡೆಯುವುದಿಲ್ಲ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಉಪಸ್ಥಿತರಿದ್ದರು.
‘ಜಾತಿ ಜನಗಣತಿ ವರದಿ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಸಿಎಂ ತಿಳಿಸಿದ್ದಾರೆ. ನನ್ನ ಅಭಿಪ್ರಾಯವನ್ನು ಅಲ್ಲೆ ಮಂಡಿಸುತ್ತೇನೆ. ಈಗಾಗಲೇ ಸಮೀಕ್ಷೆ ನಡೆದು ಸರಕಾರಕ್ಕೆ ವರದಿ ಬಂದಿದೆ. ಅನೇಕ ಸಮುದಾಯಗಳ ಆತಂಕಗಳಿವೆ. ಅದನ್ನು ನಿವಾರಿಸುವುದಾಗಿ ಹಾಗೂ ಯಾವುದೇ ಸಮುದಾಯಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ದೇಶದಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ಜಾತಿ ಜನಗಣತಿ ಅಗತ್ಯ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಸಾಮಾಜಿಕ ನ್ಯಾಯ ಕಲ್ಪಿಸಲು ಜಾತಿ ಜನಗಣತಿ ನಡೆಸಲು ನಮ್ಮ ವಿರೋಧವಿಲ್ಲ’
-ಈಶ್ವರ್ ಖಂಡ್ರೆ, ಅರಣ್ಯ ಸಚಿವ