ಫಲಾನುಭವಿಗಳ ವಂತಿಗೆ ಹಾಗೂ ಬ್ಯಾಂಕ್ ಸಾಲಕ್ಕೆ ಒಪ್ಪಿದರೆ ಮಾತ್ರ ಮನೆ: ಸಚಿವ ಝಮೀರ್ ಅಹ್ಮದ್

Update: 2023-07-21 18:41 GMT

ಬೆಂಗಳೂರು, ಜು.21: ಗದಗ-ಬೆಟಗೇರಿ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜೀವ್ ಗಾಂಧಿ ವಸತಿ ನಿಗಮದಿಂದ ಕೈಗೊಂಡಿದ್ದ 3,630ಮನೆಗಳ ವಸತಿ ಸಮುಚ್ಚಯ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಿದೆ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಗದಗ ಹಾಗೂ ರೋಣ ಕ್ಷೇತ್ರದ ಶಾಸಕರು ಆಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರೊಂದಿಗೆ ಸಭೆ ನಡೆಸಿದ ಅವರು, ಈ ಯೋಜನೆಯಡಿಯಲ್ಲಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಿ ಬ್ಯಾಂಕ್ ಸಾಲ ಪಡೆಯಲು ಒಪ್ಪಿಗೆ ಪತ್ರ ಕೊಟ್ಟು, ಸಾಲ ಮಂಜೂರಾದ ಬಳಿಕ ಮನೆ ಹಂಚಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಮೊದಲ ಹಂತದಲ್ಲಿ 1008 ಮನೆ ಪೂರ್ಣಗೊಳಿಸಲು ಅಗತ್ಯವಾದ ಆರ್ಥಿಕ ನೆರವು ಒದಗಿಸಲು ತೀರ್ಮಾನಿಸಲಾಗಿದೆ. ಒಂದೊಮ್ಮೆ ಯಾರಾದರೂ ಫಲಾನುಭವಿಗಳು ವಂತಿಗೆ ಪಾವತಿಸಿ ಬ್ಯಾಂಕ್ ಸಾಲಕ್ಕೆ ಒಪ್ಪಿಗೆ ನೀಡದಿದ್ದರೆ ಅವರನ್ನು ಬಿಟ್ಟು ಇತರೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಮೊದಲ ಹಂತದ ವಸತಿ ಸಮುಚ್ಚಯದಲ್ಲಿ 1008 ಪೈಕಿ 252 ಮನೆ ಈಗಾಗಲೇ ಹಂಚಿಕೆ ಆಗಿದ್ದು ಅವರ ಬಳಿಯೂ ವಂತಿಗೆ ಪಡೆದು ಬ್ಯಾಂಕ್ ಸಾಲಕ್ಕೆ ಒಪ್ಪಿಗೆ ಕಡ್ಡಾಯವಾಗಿ ಪಡೆಯಬೇಕು. ಉಳಿದ ಮನೆಗಳ ಬಾಕಿ ಇರುವ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಿ ವಂತಿಗೆ, ಬ್ಯಾಂಕ್ ಸಾಲದ ಮೊತ್ತ ಬಂದ ನಂತರವಷ್ಟೇ ಮನೆ ಕೀಲಿ ಕೊಡಬೇಕು ಎಂದು ಝಮೀರ್ ಅಹ್ಮದ್ ಸೂಚಿಸಿದರು.

ಇದಾದ ತಕ್ಷಣ ಎರಡನೇ ಹಂತದ 2622 ಮನೆಗಳ ವಸತಿ ಸಮುಚ್ಚಯ ನಿರ್ಮಾಣ ಪೂರ್ಣಗೊಳಿಸಲು ತ್ವರಿತ ಕ್ರಮ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ವೈಶಾಲಿ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News