ಕೊಳಗೇರಿಯಲ್ಲಿ ಮನೆ ನಿರ್ಮಾಣ: ಗುತ್ತಿಗೆ ಅವಧಿ 2ನೇ ಬಾರಿ ವಿಸ್ತರಿಸಲು ನಿರಾಕರಿಸಿದ ಹೈಕೋರ್ಟ್

Update: 2024-01-28 14:51 GMT

ಬೆಂಗಳೂರು: ಕೊಳಗೇರಿ ಜನರ ಜೀವನದ ಸ್ಥಿತಿಗತಿಗಳನ್ನು ಸುಧಾರಿಸುವ ಅವಶ್ಯಕತೆಯಿದ್ದು, ಕೊಳಚೆ ಪ್ರದೇಶದ ನಿವಾಸಿಗಳ ಮನೆ ನಿರ್ಮಾಣ ಕಾಮಗಾರಿಯನ್ನು ಲಘುವಾಗಿ ಪರಿಗಣಿಸಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೊಳಚೆ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ನೀಡಿದ್ದ ಗುತ್ತಿಗೆ ಅವಧಿಯನ್ನು 2ನೆ ಬಾರಿ ವಿಸ್ತರಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ನಗರದ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಬಗ್ಗೆ ಗುತ್ತಿಗೆ ಪಡೆದಿದ್ದ ಐಶ್ವರ್ಯಗಿರಿ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಗುತ್ತಿಗೆ ಅವಧಿಯನ್ನು ವಿಸ್ತರಿಸಲು ನಿರಾಕರಿಸಿ ಆದೇಶಿಸಿದೆ.

ಗುತ್ತಿಗೆ ಪಡೆದು ಅರ್ಜಿದಾರ ಸಂಸ್ಥೆ ಒಂದು ದಶಕ ಕಳೆದರೂ ಮನೆಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಮನೆಗಳನ್ನು ನಿರ್ಮಿಸುತ್ತಿರುವ ಕಂಪೆನಿ (ಅರ್ಜಿದಾರರು) ಟೆಂಡರನ್ನು ಲಘುವಾಗಿ ಪರಿಗಣಿಸುವಂತಾಗಬಾರದು. ಹೀಗಾಗಿ, ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2017ನೇ ಅವಧಿಯಲ್ಲಿ ರಾಜರಾಜೇಶ್ವರಿ ನಗರ ಕೊಳಚೆ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಮೂರು ಕಾರ್ಯಾದೇಶದ ಪ್ರಕಾರ ನಿಗದಿಪಡಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಲು ವಿಸ್ತರಿಸಲು ಕೆಎಸ್‍ಡಿಬಿಗೆ ಮನವಿ ಮಾಡಲಾಗಿತ್ತು.

ಮೊದಲ ಪ್ಯಾಕೇಜ್ ಏಳು ಕೊಳಗೇರಿಗಳಲ್ಲಿ 543 ನೆಲಮಹಡಿ ಘಟಕಗಳ ನಿರ್ಮಾಣವಾಗಿತ್ತು. ಎರಡನೇ ಪ್ಯಾಕೇಜ್ 575 ನೆಲಮಹಡಿ ಘಟಕಗಳ ನಿರ್ಮಾಣಕ್ಕೆ ಮತ್ತು ಮೂರನೇ ಪ್ಯಾಕೇಜ್‍ನಲ್ಲಿ 860 ನೆಲಮಹಡಿ ಘಟಕಗಳ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆಯಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಅವಧಿ ವಿಸ್ತರಣೆ ಮನವಿ ಸಲ್ಲಿಸಿದ್ದರು.

ಆದರೆ, ಈ ಮನವಿಯನ್ನು 2018ರ ಮಾರ್ಚ್ 7ರಂದು ಕೆಎಸ್‍ಡಿಬಿ ಎರಡು ವರ್ಷಗಳ ಕಾಲ ವಿಸ್ತರಣೆ ಮಾಡಿತ್ತು. ಮತ್ತೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ವಿಸ್ತರಣೆ ಮಾಡುವಂತೆ ಕೋರಿತ್ತು. ಇದನ್ನು ತಿರಸ್ಕರಿಸಿದ್ದ ಕೆಎಸ್‍ಡಿಬಿ 2021ರ ಜುಲೈ 27 ರಂದು ಗುತ್ತಿಗೆಯನ್ನು ಕೊನೆಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News