ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾನು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ: ಎಚ್.ವಿಶ್ವನಾಥ್
ಮೈಸೂರು, ಆ.5: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಾನು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ನಾನು ಕಾಂಗ್ರೆಸ್ ನಿಂದ ಟಿಕೆಟ್ ಕೇಳಬೇಕು ಎಂದು ಕೊಂಡಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ್ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರು ಪ್ರಸ್ತಾಪವಾಗುತ್ತಿದೆ. ಅದು ಒಳ್ಳೆಯದೆ. ನಾನು ಕೂಡ ಟಿಕೆಟ್ ಕೇಳುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೊ ನೋಡೋಣ ಎಂದರು.
ಸತ್ಯಹರಿಶ್ಚಂದ್ರ ಸತ್ತ ಮೇಲೆ ಇಬ್ಬರೇ ಸತ್ಯಹರಿಶ್ಚಂದ್ರರು ಇರುವುದು. ಒಬ್ಬರು ಎಚ್.ಡಿ. ಕುಮಾರಸ್ವಾಮಿ, ಇಬ್ಬೊಬ್ಬರು ಬಸವರಾಜ ಬೊಮ್ಮಾಯಿ. ಇಬ್ಬರೂ ಮುಖ್ಯಮಂತ್ರಿ ಆಗಿದ್ದವರು. ಆಗ ಮಾಡಿದ ಅದ್ವಾನಗಳನ್ನು ಜನ ಈಗಲೂ ಅನುಭವಿಸುತ್ತಿದ್ದಾರೆ. ಕುಮಾರಸ್ವಾಮಿ ಅವರೇ ಆ ಪೆನ್ ಡ್ರೈವ್ ಏನಾಯ್ತು? ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ. ಏನೇನು ಆರೋಪ ಮಾಡುತ್ತೀರಿ? ಆದರೆ ಯಾವುದನ್ನು ಸಾಬೀತು ಮಾಡಿದ್ದೀರಿ? ನೀವು ಮುಖ್ಯಮಂತ್ರಿ ಆಗಿದ್ದವರು. ಮಾತಿನಿಂದ ನಿಮ್ಮ ಘನತೆ ಕಡಿಮೆಯಾಗುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಆಗಿದ್ದವರು ಸುಖಾಸುಮ್ಮನೆ ಆರೋಪ ಮಾಡುವುದಲ್ಲ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಗೆ ಹೊಟ್ಟೆ ಉರಿ ತಡೆದುಕೊಳ್ಳಲು ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರ ಬರುತ್ತದೆ, ಸಿಎಂ ಆಗುತ್ತೇನೆಂದು ಕನಸು ಕಾಣುತ್ತಿದ್ದರು. ಕಿಂಗ್ ಮೇಕರ್ ಆಗುತ್ತೇನೆ, ಸಿಎಂ ಆಗುತ್ತೇನೆ ಎಂದುಕೊಂಡಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಹೀಗಾಗಿ ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ- ಟಿಎಸ್‌ಪಿ ಹಣ ಬಳಕೆ ವಿಚಾರವನ್ನು ಸಮರ್ಥನೆ ಮಾಡಿದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಅಗತ್ಯ ಇರುವ ಕಡೆಗೆ ಅನುದಾನ ಬಳಸಿಕೊಳ್ಳಲು ಸರ್ಕಾರಕ್ಕೆ ಅನುವಂಶೀಯವಾದ ಅಧಿಕಾರ ಇದೆ. ಅದನ್ನೇ ಬಿಜೆಪಿ, ಜೆಡಿಎಸ್‌ನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಏನು ಮಾಡಿದ್ದರು ಎಂದು ಪ್ರಶ್ನಿಸಿದರು.
ನಾನೂ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ 12 ಸಚಿವ ಸ್ಥಾನ ಸಿಕ್ಕಿತ್ತು. ಇದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು. ಬಂಡೆಪ್ಪ ಕಾಶಂಪೂರ್ ಒಬ್ಬ ಕುರುಬ, ಇನ್ನಿಬ್ಬರು ಲಿಂಗಾಯತರು. ಎರಡು ಸಚಿವ ಸ್ಥಾನ ಖಾಲಿಯೇ ಇತ್ತು. ದಲಿತರು ಹಾಗೂ ಮುಸ್ಲಿಮರಿಗೆ ಕೊಡಿ ಎಂದು ಕೇಳಿದ್ದೆ. ಖಾಲಿ ಬಿಟ್ಟರೆ ಹೊರತು ದಲಿತರಿಗೆ ಸಚಿವ ಸ್ಥಾನ ಕೊಡಲಿಲ್ಲ .ಇಂತವರು ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೊಂದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಹೋರಾಟ ವೀರೇಂದ್ರ ಹೆಗ್ಗಡೆ ವಿರುದ್ಧ ಅಲ್ಲ ಎಂದು ಹೇಳಿದರು.