ನಾನೇನು ರಾಜಕೀಯ ಸನ್ಯಾಸಿಯಲ್ಲ; 2024ರ ನಂತರ ವೈಯಕ್ತಿಕ ರಾಜಕಾರಣ ಮಾಡುತ್ತೇನೆ: ಸಿ.ಟಿ.ರವಿ

Update: 2023-11-11 15:48 GMT

ಸಿ.ಟಿ.ರವಿ

ಬೆಂಗಳೂರು, ನ. 11: ‘ನಾನೇನು ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ಬಳಿಕ ನಾನು ನನ್ನ ವೈಯಕ್ತಿಕ ರಾಜಕಾರಣ ಮಾಡುತ್ತೇನೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ನೇಮಕಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಎನ್ನುವುದು ಇಬ್ಬರ ನಡುವಿನ ಚದುರಂಗದ ಆಟವಲ್ಲ. ಬದಲಿಗೆ, ತಂಡವಾಗಿ ಎಲ್ಲರೂ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲಿದೆ. ನಾಯಕ ಆದ ವ್ಯಕ್ತಿ ಸಮನ್ವಯತೆ ಮೂಡಿಸುವ ಕೆಲಸ ಮಾಡಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು’ ಎಂದು ಹೇಳಿದರು.

ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿರಲಿಲ್ಲ. ಹೀಗಾಗಿ ನನಗೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಗುರಿ 2024ರ ಲೋಕಸಭೆ ಚನಾವಣೆಯಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎನ್ನುವುದಾಗಿದೆ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಆ ನಿಟ್ಟಿನಲ್ಲಿ ಮಾತ್ರ ನಮ್ಮ ಗಮನ ಇರಲಿದೆ ಎಂದು ಸಿ.ಟಿ.ರವಿ ನುಡಿದರು.

‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹ, ಯೋಗ್ಯತೆ ಪಕ್ಷದಲ್ಲಿ ಬಹಳಷ್ಟು ಜನರಿಗಿದೆ. ಆದರೆ ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಈಗ ಅದನ್ನೇ ವರಿಷ್ಠರು ಮಾಡಿದ್ದಾರೆ ಎಂದ ಅವರು, ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರರಿಗೆ ಈಗಾಗಲೇ ಅಭಿನಂದನೆ ಸಲ್ಲಿಸಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ಅಧಿಕಾರವಲ್ಲ ಜವಾಬ್ದಾರಿ’ ಎಂದು ಹೇಳಿದರು.

ಎರಡೂವರೆ ದಶಕದಿಂದ ಯಾವ ಹುದ್ದೆಯನ್ನೂ ಕೇಳಿ ಪಡೆದಿಲ್ಲ. ಬೂತ್ ಮಟ್ಟದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರೆಗೂ ನನಗೆ ಪಕ್ಷ ಜವಾಬ್ದಾರಿಯನ್ನು ಕೇಳದೆ ಕೊಟ್ಟಿದೆ. ಇದೀಗ ವಿಜಯೇಂದ್ರಗೆ ಜವಾಬ್ದಾರಿ ನೀಡಿದೆ. ಪಕ್ಷದ ಸಂಘಟನೆ, ಲೋಕಸಭೆ ಸೇರಿ ಮುಂಬರಲಿರುವ ಎಲ್ಲ ಚುನಾವಣೆ ಗೆಲ್ಲಬೇಕು ಎಂದು ರವಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News