ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಸಿ.ಟಿ. ರವಿ
ಬೆಂಗಳೂರು: ‘ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ನಾನು ಪಕ್ಷದ ಕಾರ್ಯಕರ್ತ. ಪಕ್ಷವು ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ರವಿವಾರ ಇಲ್ಲಿನ ಕುರುಬರಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರದ ಬಗ್ಗೆ ಗೊತ್ತಿಲ್ಲ. ನಾನು ಸದ್ಯ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾತ್ರ. ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ದೊಡ್ಡ ಜವಾಬ್ದಾರಿ. ಅದನ್ನು ಕೇಳಿ ಪಡೆಯಲು ಆಗುವುದಿಲ್ಲ’ ಎಂದು ವಿವರಣೆ ನೀಡಿದರು.
‘ಭವಿಷ್ಯ ಎನ್ನುವುದು ನಿರೀಕ್ಷೆ ಮತ್ತು ಆಕಾಂಕ್ಷೆ. ಭವಿಷ್ಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡಬೇಕು ಮತ್ತು ಯಾವಾಗ ಕೊಡಬೇಕು ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ. ಆದರೆ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸದ್ಯಕ್ಕೆ ನನಗೆ ಯಾವುದೇ ವಿಚಾರ ಗೊತ್ತಿಲ್ಲ ಎಂದು ರವಿ ಪುನರುಚ್ಚರಿಸಿದರು.
‘ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ರಾಜ್ಯದ ಹಿರಿಯರು. ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಂತಿಮ ನಿರ್ಣಯ ಆಗಿದೆ ಎಂದು ಹೇಳಿಲ್ಲ. ಈ ಬಗ್ಗೆ ಚರ್ಚೆ ಆಗಿದೆ ಎಂದಷ್ಟೇ ಹೇಳಿದ್ದಾರೆ. ಪಕ್ಷದ ಹೈಕಮಾಂಡ್? ತೀರ್ಮಾನ ಏನು ಎಂಬುದು ಇನ್ನೂ ಗೊತ್ತಿಲ್ಲ ಎಂದು ಸಿ.ಟಿ.ರವಿ ನುಡಿದರು.
‘ಮೂವತ್ತೈದು ವರ್ಷಗಳಿಂದಲೂ ನಾನು ಬಿಜೆಪಿಯಲ್ಲಿದ್ದೇನೆ. ಆಗಿನಿಂದಲೂ ಬಿ.ಎಸ್.ಯಡಿಯೂರಪ್ಪರ ಆಶೀರ್ವಾದವನ್ನು ಪಡೆಯುತ್ತಾ ಬಂದಿದ್ದೇನೆ. ಈಗಲೂ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಇದರಲ್ಲಿ ವಿಶೇಷವೇನೂ ಇಲ್ಲ’ ಎಂದು ರವಿ, ಬಿಎಸ್‍ವೈ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದರು
‘ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ ಶೇ.40 ಕಮೀಷನ್ ಆರೋಪದ ಮಾಡಿದ್ದ ಕಾಂಗ್ರೆಸ್ ಸರಕಾರ ಇದೀಗ ಅಧಿಕಾರಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ಮಾಡಲಿ, ಸತ್ಯ ಬಯಲಿಗೆಳೆಯಲಿ. ಶೇ.40ರಷ್ಟು ಕಮಿಷನ್ ಯಾರು, ಯಾರಿಗೆ ಕೊಟ್ಟಿದ್ದಾರೆಂಬುದು ತನಿಖೆಯಾಗಲಿ. ಯಾರ ಮೇಲೆ ಆರೋಪ ಇತ್ತು ಎಂಬುದನ್ನು ಬಹಿರಂಗಪಡಿಸಲಿ’ ಎಂದು ರವಿ ಸವಾಲು ಹಾಕಿದರು.