ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ: ಮಾಜಿ ಸಚಿವ ವಿ.ಸೋಮಣ್ಣ ಬೇಸರ

Update: 2023-08-12 12:51 GMT

ಬೆಂಗಳೂರು, ಆ. 12: ‘ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ವಯಂಕೃತ ಅಪರಾಧದಿಂದ ಸೋತು ಕ್ಷೇತ್ರದ ಜನರಿಗೆ ಅಪಚಾರ ಮಾಡಿದ್ದೇನೆ. ಈ ಮೂಲಕ ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶನಿವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗೆ ಚುನಾವಣೆಯಲ್ಲಿ ನಮ್ಮವರೇ ಮೋಸ ಮಾಡಿದರು. ಅದು ಎಲ್ಲರಿಗೂ ಗೊತ್ತು. ನಮ್ಮ ನಾಯಕರ ಒತ್ತಾಯಕ್ಕೆ ಮಣಿದು ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೆ. ಹೈಕಮಾಂಡ್ ನೀಡಿದ ಸವಾಲನ್ನು ಸ್ವೀಕರಿಸಿ ಕೆಲಸ ಮಾಡಿದ್ದೇನೆ. ಆದರೂ, ಸೋಲನ್ನು ಅನುಭವಿಸಿದೆ’ ಎಂದು ಹೇಳಿದರು.

‘ಒಂದು ಕ್ಷೇತ್ರದಲ್ಲಿ 3 ಸಾವಿರ ಮತಗಳಿಂದ ಸೋತೆ, ಇನ್ನೊಂದು ಕಡೆ 70 ಸಾವಿರ ಮತ ತೆಗೆದುಕೊಂಡೆ. ನಾನು ಹೇಗೆ ಸೋತೆ ಎಂಬುದು ಎಲ್ಲರಿಗೂ ಗೊತ್ತು. ಅದನ್ನು ನನ್ನ ಬಾಯಿಂದ ಬಿಡಿಸಬೇಡಿ ಎಂದ ಅವರು, ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಆಗಲಿಲ್ಲವೆಂದರೆ ಅಂದರೆ ಎರಡು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಸಿ ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ಅದರ ಮಜಾನೇ ಬೇರೆ’ ಎಂದು ಸೋಮಣ್ಣ ತಮ್ಮದೇ ದಾಟಿಯಲ್ಲಿ ತಿಳಿಸಿದರು.

‘ಡಿ.ಕೆ.ಶಿವಕುಮಾರ್ ಅವರೇ ನೀವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಉಪಮುಖ್ಯಮಂತ್ರಿ ಅಲ್ಲ. ರಾಜ್ಯದ ಆರು ಕೋಟಿ ಜನರ ಡಿಸಿಎಂ ಆಗಿದ್ದೀರಿ. ಎಷ್ಟೋ ಕುಟುಂಬಗಳು ಒದ್ದಾಟ ನಡೆಸುತ್ತಿವೆ. ಕೊಪ್ಪಳ, ಸೇಡಂ ಸೇರಿದಂತೆ ಅನೇಕ ಭಾಗದ ಕಾರ್ಮಿಕರು ವಾಪಸ್ ಊರಿಗೆ ಹೊರಟು ನಿಂತಿದ್ದಾರೆ. ಕೆಲಸ ಮಾಡಿ ಅವರಿಗೆ ಸಂಬಳ ನೀಡುವುದಕ್ಕೆ ಆಗುತ್ತಿಲ್ಲ’ ಎಂದು ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News