ಮುಸ್ಲಿಮರೂ ಸೇರಿ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೇನೆ, ಇದರಲ್ಲಿ ತಪ್ಪೇನಿದೆ?: ಸಿಎಂ ಸಿದ್ದರಾಮಯ್ಯ

Update: 2023-12-05 08:37 GMT

ಬೆಳಗಾವಿ: ಮುಸ್ಲಿಮರೂ ಸೇರಿದಂತೆ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೇನೆ, ಇದರಲ್ಲಿ ತಪ್ಪೇನಿದೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಸಮಾವೇಶದ ಹೇಳಿಕೆ ವಿಚಾರವಾಗಿ, ಅದರಲ್ಲಿ ಏನು ತಪ್ಪಿದೆ?‌ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೆ ಅದನ್ನು ಬಿಟ್ಟು ಬರೆದರೆ ನಾನು ಏನು ಮಾಡುವುದು? ಎಂದು ಪ್ರಶ್ನಿಸಿದರು.

ನನ್ನ ಹೇಳಿಕೆಗೆ ಉಪ್ಪು ಖಾರ ಹಾಕಿ ಹೇಳುತ್ತಿದ್ದಾರೆ. ಮುಸ್ಲಿಂ ಸೇರಿ ಎಲ್ಲರಿಗೂ ರಕ್ಷಣೆ ಕೊಡುತ್ತೇನೆ ಎಂದು ಹೇಳಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸೋಮವಾರ ಹುಬ್ಬಳ್ಳಿ‌‌ಯಲ್ಲಿ ನಡೆದ ಮುಸ್ಲಿಂ ಸಮಾವೇಶವನ್ನು ಉದ್ಘಾಟಿಸಿ ಭಾಷಣ ಮಾಡಿದ್ದ ಸಿಎಂ‌ ಸಿದ್ದರಾಮಯ್ಯ ಅವರು,‌ ʼರಾಜಕೀಯ ‌ಲಾಭಕ್ಕೆ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಾರೆ. ಇದರಿಂದ ಲಾಭ ತಾತ್ಕಾಲಿಕ, ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕುʼ ಎಂದಿದ್ದರು.

ಈ ವರ್ಷ ನಾಲ್ಕು ಸಾವಿರ ಕೋಟಿ ಅನುದಾನ ಅಲ್ಪಸಂಖ್ಯಾತರ ಇಲಾಖೆಗೆ ನೀಡಿದ್ದೇನೆ. ಮುಂದೆ ಅದನ್ನು 10 ಸಾವಿರ ಕೋಟಿಗೆ ಹೆಚ್ಚಿಸಬೇಕು ಅನ್ನೋದು ನಮ್ಮ ಉದ್ದೇಶ. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬೇಕು. ದೇಶದ ಸಂಪತ್ತಲ್ಲಿ ನಿಮಗೆ ಪಾಲು ಸಿಗಬೇಕು. ನಿಮಗೆ ಅನ್ಯಾಯವಾಗೋಕೆ ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಮುಸ್ಲಿಂ ನಾಯಕರಿಗೆ ಸಿದ್ದರಾಮಯ್ಯ ಹೇಳಿದ್ದರು.

ಎಲ್ಲ ಜಾತಿಯಲ್ಲಿ ಬಡವರು ಇದ್ದಾರೆ. ನಾವು ಮಾಡಿದ ಕಾರ್ಯಕ್ರಮ‌ ಒಂದು ಜಾತಿಗೆ ಸೀಮಿತ ಇಲ್ಲ. ಅದು ಎಲ್ಲ ಬಡವರಿಗೆ ಸೇರಿದ ಕಾರ್ಯಕ್ರಮ ಎಂದು ಹೇಳಿದ್ದರು.

ಕೇವಲ ಅಕ್ಷರ ಕಲಿತರೆ ಪ್ರಯೋಜನ ಇಲ್ಲ. ವೈಚಾರಿಕತೆಯಿಂದ ಕೂಡಿದ ಶಿಕ್ಷಣ ನಮಗೆ ಬೇಕು. ಹಿಂದೂ, ಮುಸ್ಲಿಂ ಇರಲಿ ನಾವೆಲ್ಲ ಒಂದೇ ತಾಯಿ ಮಕ್ಕಳು. ಕಾಯಿಲೆ ಬಂದ್ರೆ ನಮ್ಮ ಜಾತಿ ರಕ್ತ ಕೊಡಿ ಅಂತಾ ಕೇಳುತ್ತೇವಾ? ಬದುಕಿದ್ರೆ ಸಾಕು ಯಾರ ರಕ್ತ ಆದರೂ ಕೊಡಿ ಎಂದು ಕೇಳುತ್ತೇವೆ ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News