ನನ್ನ ಸ್ಥಾನಮಾನಕ್ಕೆ ಅನ್ವಯ ಶಿಷ್ಟಾಚಾರ ಪಾಲನೆ ಮಾಡಿಲ್ಲ, ಸರಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ವಿಪಕ್ಷದ ನಾಯಕನಿಗೆ ನೀಡಬೇಕಾದ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದ್ದು, ರಾಜ್ಯ ಸರಕಾರದ ಈ ಧೋರಣೆ ವಿರೋಧಿಸಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನನ್ನ ಸ್ಥಾನಮಾನಕ್ಕೆ ಅನ್ವಯ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಹೀಗಾಗಿ ನಾನು ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ನನಗೆ ಏನೂ ಬೇಕಾಗಿಲ್ಲ. ನನ್ನ ಹಕ್ಕಿಗೆ ಚ್ಯುತಿಯಾದರೆ ಯಾರು ಹೊಣೆ? ನನ್ನ ಮೇಲೆ ಹಗೆತನ ಯಾಕೆ? ನನಗೆ ಕೊಡಬೇಕಾದ ಸವಲತ್ತು ನೀಡಲು ಯಾವಾಗ ಸಭೆ ನಡೆಸುತ್ತೀರಿ? ಇದೆಲ್ಲಾ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ’ ಎಂದು ದೂರಿದರು.
ನಿವಾಸಕ್ಕೆ ಭದ್ರತೆಯೂ ಇಲ್ಲ. ಇದು ನನ್ನ ಹಕ್ಕು, ಅದನ್ನು ಕೇಳುತ್ತಿದ್ದೇನೆ. ಅಲ್ಲದೆ, ನನಗೆ ಜೀವ ಭಯ ಇಲ್ಲ. ನಾನು ಅಧಿಕಾರ ವಹಿಸಿಕೊಂಡು 20 ದಿನಗಳಾಗಿದೆ. ಆದರೆ, ಇಲ್ಲಿಯವರೆಗೆ ಎಸ್ಕಾರ್ಟ್ ಕೊಟ್ಟಿಲ್ಲ. ನಾನು ವಿಧಾನ ಪರಿಷತ್ ವಿಪಕ್ಷದ ನಾಯಕನಾದರೂ ನನಗೆ ಸರಕಾರಿ ನಿವಾಸ ನೀಡಿಲ್ಲ. ಕೇವಲ ಓರ್ವ ಗನ್ ಮ್ಯಾನ್ ನೀಡಿದ್ದಾರೆ. ಬೆಂಗಾವಲು ಪಡೆ ನೀಡುವಂತೆ ಡಿಐಜಿಗೆ ಪತ್ರ ಬರೆದಿದ್ದೇನೆ. ಅವರು ಸಭೆ ಮಾಡಿ ಪರಿಶೀಲಿಸುತ್ತೇನೆ ಎನ್ನುತ್ತಾರೆ. ನಾನು ದಲಿತನಾಗಿದ್ದಕ್ಕೆ ಹೀಗೆ ನಡೆದುಕೊಳ್ಳುತ್ತಾರಾ? ಎಂದು ಪ್ರಶ್ನೆ ಮಾಡಿದರು.
ವಿಳಂಬದ ಸಂಪ್ರದಾಯ ಬಿಜೆಪಿ ಆರಂಭಿಸಿದ್ದಲ್ಲವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಕಾರು ಕೇಳಿದ್ದರು ಎಂದು ಮಾತ್ರ ಗೊತ್ತು. ವಿಳಂಬ ಮಾಡಿದ್ದರೆ ಅದು ಕೂಡ ತಪ್ಪು, ನಾನು ಸಮರ್ಥಿಸಿಕೊಳ್ಳುವುದಿಲ್ಲ. ಹಿಂದಿನ ಸರಕಾರ ತಡೆ ಮಾಡಿದೆ ಎಂಬ ಕಾರಣಕ್ಕೆ ಈಗ ವಿಳಂಬ ಮಾಡುತ್ತಿದ್ದೇವೆ ಎಂದಾದರೂ ಸರಕಾರ ಹೇಳಲಿ ಎಂದು ಒತ್ತಾಯಿಸಿದರು.
ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದನ್ನು ಪರಿಶೀಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ನಿನ್ನೆ ಸ್ಥಳಕ್ಕೆ ಹೋಗಿಲ್ಲ, ಬದಲಾಗಿ ಬಿರಿಯಾನಿ ತಿನ್ನಲು ಹೋಗಿದ್ದರು. ನಿರ್ಲಕ್ಷ್ಯದ ಪರಿಣಾಮ ಡ್ಯಾಂ ಅವಘಡ ಸಂಭವಿಸಿದೆ. ಇನ್ನೂ, ಭರಪೂರ ಮಳೆಯಿಂದಾಗಿ ಬರಗಾಲದ ಬವಣೆ ನೀಗಿತು ಎಂದು ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರು. ಕ್ರಸ್ಟ್ ಗೇಟ್ ದುರಂತವು 65 ಟಿಸಿಎಂ ಅಡಿ ನೀರು ವ್ಯರ್ಥ ಹರಿಬಿಡುವ ಪರಿಸ್ಥಿತಿ ಸೃಷ್ಟಿಸಿದೆ. ನಾಟಿ ಮಾಡಿದ ಭತ್ತ ಹಾನಿ, ಭವಿಷ್ಯದ ಬೆಳೆ ಕೈತಪ್ಪುವ ಆತಂಕದಲ್ಲಿ ರೈತರಿದ್ದಾರೆ ಎಂದು ಅವರು ತಿಳಿಸಿದರು.