ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ನನ್ನ ನಿಲುವು ಸ್ಪಷ್ಟ: ಲಕ್ಷ್ಮಣ ಸವದಿ

Update: 2024-01-25 12:23 GMT

ಲಕ್ಷ್ಮಣ ಸವದಿ

ಬೆಂಗಳೂರು: ‘ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಬಿಜೆಪಿಗೆ ಹೋಗುವುದಿಲ್ಲ, ನನ್ನ ನಿಲುವು ಬಹಳ ಸ್ಪಷ್ಟ’ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ನಾನು ಮತ್ತು ಶೆಟ್ಟರ್ ಒಟ್ಟಿಗೆ ತೀರ್ಮಾನ ಮಾಡಿ ಕಾಂಗ್ರೆಸ್ ಸೇರ್ಪಡೆ ಆಗಿರಲಿಲ್ಲ. ನಾನು ಮೊದಲು ಬಂದೆ. ಆ ಬಳಿಕ ಟಿಕೆಟ್ ಸಿಗದ ಕಾರಣ ಶೆಟ್ಟರ್, ಕಾಂಗ್ರೆಸ್‍ಗೆ ಬಂದರು. ಇದೀಗ ಅವರು ಏಕೆ ಬಿಜೆಪಿಗೆ ಹೋಗಿದ್ದಾರೆ ಎಂದು ನನಗೆ ಗೊತ್ತಿಲ್ಲʼ ಎಂದು ವಿವರಣೆ ನೀಡಿದರು.

‘ನಾನು ಮತ್ತು ಶೆಟ್ಟರ್ ಹಳೆಯ ಸ್ನೇಹಿತರು. ಪ್ರತಿದಿನ ನಾವಿಬ್ಬರೂ ಮಾತನಾಡುತ್ತೇವೆ. ಆದರೆ ಅವರು ಈ ನಿರ್ಧಾರ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಲೋಕಸಭೆ ಚುನಾವಣಾ ಹಿನ್ನೆಲೆ ಬಿಜೆಪಿಯವರಿಗೆ ನಮ್ಮ ಅನಿರ್ವಾಯತೆ ಇದೆ. ಹೀಗಾಗಿ ಸಂಪರ್ಕ ಮಾಡುತ್ತಿರುತ್ತಾರೆ. ಆದರೆ, ನಾನು ಎಲ್ಲಿಯೂ ಹೋಗುವುದಿಲ್ಲ’ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಇದೀಗ ಮಾತನಾಡುವುದು ಸೂಕ್ತವಲ್ಲ. ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ಎಂದ ಅವರು, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ವಿಚಾರವಾಗಿ ಸಿಎಂ ಭೇಟಿಯಾಗಿದ್ದೆ. ಕೃಷಿ ಕಾಲೇಜಿನ ಬಗ್ಗೆ ಬಜೆಟ್‍ನಲ್ಲಿ ಅನುದಾನ ಬಿಡುಗಡೆ ಸಂಬಂಧ ಚರ್ಚಿಸಲು ಹೋಗಿದ್ದೆ ಬೇರೆ ರಾಜಕೀಯ ಚರ್ಚೆ ಇಲ್ಲ ಎಂದು ಸವದಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News