ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ‘ಕುರಿ ಮಾಂಸ’ : ಐಸಿಎಆರ್ ವರದಿ

Update: 2024-07-31 14:39 GMT

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ಬಂದದ್ದು ನಾಯಿ ಮಾಂಸವಲ್ಲ, ಕುರಿ ಮಾಂಸ ಎಂದು ಹೈದ್ರಾಬಾದ್‍ನ ಐಸಿಎಆರ್ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆಯು ಬುಧವಾರದಂದು ಸಲ್ಲಿಸಿದ ವಿಶ್ಲೇಷಣಾ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಶುಕ್ರವಾರ(ಜು.26) ಸಂಜೆಯ ವೇಳೆಗೆ ನಗರಕ್ಕೆ ರೈಲುಗಳ ಮುಖಾಂತರ ರಾಜಸ್ಥಾನದಿಂದ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಮಾಹಿತಿ ಬಂದ ಬೆನ್ನಲ್ಲೇ, ವ್ಯಾಪ್ತಿಯ ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ರಾಜಸ್ಥಾನದಿಂದ ಬಂದ ರೈಲಿನ ಮೂಲಕ ಸ್ವೀಕೃತವಾದ ಪಾರ್ಸೆಲ್‍ಗಳನ್ನು ನಿಲ್ದಾಣದ ಹೊರ ಆವರಣದಲ್ಲಿ ಸಾಗಾಣಿಕೆ ವಾಹನದಲ್ಲಿರಿಸಿರುವುದು ಕಂಡುಬಂದಿತ್ತು.

ಒಟ್ಟು 84 ಸಂಖ್ಯೆಯ ಪಾರ್ಸೆಲ್‍ಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಪ್ರಾಣಿಯ ಮಾಂಸವಿರುವುದು ಕಂಡುಬಂದಿರುತ್ತದೆ. ಯಾವ ಪ್ರಾಣಿಯ ಮಾಂಸವೆಂದು ಖಚಿತಪಡಿಸಿಕೊಳ್ಳಲು ಮಾಂಸದ ಕಾನೂನಾತ್ಮಕ ಆಹಾರ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಮಾದರಿಯ ವಿಶ್ಲೇಷಣೆಗಾಗಿ ಹೈದ್ರಾಬಾದ್‍ನ ಐಸಿಎಆರ್ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು. ಮಾಂಸವು ಕುರಿಯದ್ದು ಎಂದು ಸಂಸ್ಥೆಯು ವರದಿ ನೀಡಿದ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News