ಸಂವಿಧಾನ ಉಳಿಸದಿದ್ದರೆ ದೇಶ ಸರ್ವಾಧಿಕಾರದತ್ತ ಸಾಗಲಿದೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು : ಸಂವಿಧಾನ ಉಳಿದರೆ ದೇಶದಲ್ಲಿ ಐಕ್ಯತೆ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ಎಲ್ಲರೂ ಸುಖ, ಸಮೃದ್ಧಿಯಿಂದ ಬಾಳುತ್ತಾರೆ. ಆದರೆ, ಇವತ್ತು ಸಂವಿಧಾನ ಉಳಿಸುವ ಕಾಳಜಿ ಇಟ್ಟುಕೊಂಡು ಕೆಲಸ ಮಾಡುವಂತಹ ಸರಕಾರ ಕೇಂದ್ರದಲ್ಲಿ ಇಲ್ಲ. ಸಂವಿಧಾನ ಉಳಿಸಬೇಕು ಇಲ್ಲದಿದ್ದರೆ ದೇಶ ಸರ್ವಾಧಿಕಾರದತ್ತ ಸಾಗಲಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.
ರವಿವಾರ ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನವನ್ನು ಬದಲಾವಣೆ ಮಾಡಲು ಸಾಕಷ್ಟು ಜನ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನೀವು ಒಗ್ಗಟ್ಟಾಗಿ ನಿಲ್ಲದಿದ್ದರೆ, ಸಂವಿಧಾನ ಧಕ್ಕೆ ಆದರೆ ಮುಂದೆ ಈ ದೇಶದಲ್ಲಿ ಸರ್ವಾಧಿಕಾರ ಬರುವುದು ಖಚಿತ. ನಿಮಗೆ ಸರ್ವಾಧಿಕಾರ ಬೇಕೋ ಅಥವಾ ನ್ಯಾಯವಾಗಿ ಬದುಕುವಂತಹ ವ್ಯವಸ್ಥೆ ಬೇಕೋ ಅನ್ನೋದು ಮಹತ್ವದ್ದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಅಂದರೆ ಅಂಬೇಡ್ಕರ್ ಬರೆದ ಸಂವಿಧಾನ. ಯಾವ ದೇಶದಲ್ಲಿಯೂ ಏಕಕಾಲಕ್ಕೆ ಹೆಣ್ಣು ಮತ್ತು ಗಂಡಿಗೆ ಮತದಾನದ ಅಧಿಕಾರ ನೀಡಿಲ್ಲ. ಒಬ್ಬ ಮನುಷ್ಯನಿಗೆ ಒಂದು ಮತ, ಒಂದು ಮೌಲ್ಯ ಎಂದು ನಮ್ಮ ಸಂವಿಧಾನದಲ್ಲಿ ಇದೆ. ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ಅಂಬೇಡ್ಕರ್, ನೆಹರು ಎಲ್ಲರೂ ಸೇರಿ ಪ್ರಜಾಪ್ರಭುತ್ವದಲ್ಲಿ ಯಾವುದೇ ಬೇಧ ಭಾವ ಇಲ್ಲದೆ ಮಹಿಳೆಯರಿಗೂ ಪುರುಷರಿಗಷ್ಟೇ ಸಮಾನ ಅವಕಾಶಗಳನ್ನು ಕಲ್ಪಿಸಿದರು ಎಂದು ಅವರು ತಿಳಿಸಿದರು.
ನಮ್ಮ ಹೆಣ್ಣು ಮಕ್ಕಳಿಗೆ ಮತದಾನದ ಅವಕಾಶ ಇರಲಿಲ್ಲ. ನಮ್ಮದು ಬಡ ದೇಶ, ಕೇವಲ ತೆರಿಗೆ ಪಾವತಿ ಮಾಡುವವರು, ಭೂಮಿ ಇರುವವರು, ಸರಕಾರಿ ನೌಕರರಿಗೆ ಮಾತ್ರ ಮತದಾನದ ಹಕ್ಕು ಬೇಡ. ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕು ನೀಡಲು ಅಂಬೇಡ್ಕರ್ ಹಾಗೂ ನೆಹರು ನಿರ್ಧರಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಯಾವ ದೇಶದಲ್ಲಿ ಜನ ವಿದ್ಯಾವಂತರಿದ್ದಾರೋ, ತಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತಾರೋ ಅಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಇವತ್ತು ಅನೇಕ ದೇಶಗಳಲ್ಲಿ ಸರ್ವಾಧಿಕಾರ ಬಂದಿದೆ. ಜನರನ್ನು ಕೇಳುವವರು ಯಾರೂ ಇಲ್ಲ ಎಂದು ಅವರು ಹೇಳಿದರು.
ಕೆಲವರು ನಮ್ಮಲ್ಲಿ ಜಗಳ ಹಚ್ಚಲು ಪ್ರಾರಂಭಿಸಿದ್ದಾರೆ. ಅಂಬೇಡ್ಕರ್ ವಿರುದ್ಧ ಕೆಲವರು ಬೇರೆಯವರನ್ನು ಎಬ್ಬಿಸುವುದು, ನೆಹರು ವಿರುದ್ಧ ಎಬ್ಬಿಸುವುದು, ವಲ್ಲಭಭಾಯಿ ಹಾಗೂ ನೆಹರು, ಗಾಂಧಿ ಹಾಗೂ ನೆಹರು ನಡುವೆ ಜಗಳ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇವರು ದೇಶದ ಐಕ್ಯತೆ, ಸಂವಿಧಾನಕ್ಕಾಗಿ ಅವರೆಲ್ಲರೂ ಒಂದಾಗಿದ್ದರು ಎಂದು ಅವರು ತಿಳಿಸಿದರು.
ಸಂವಿಧಾನಕ್ಕೆ ತೀಲಾಂಜಲಿ ನೀಡಿ, ಬೇರೆಯದನ್ನು ರೂಪಿಸಲು ಒಳ ಸಂಚು ನಡೆದಿದೆ. ಸಂವಿಧಾನ ರಕ್ಷಣೆ ಮಾಡುತ್ತೇನೆ ಎಂದು ಹೇಳುವ ಮೋದಿ, ಇವತ್ತು ಈ.ಡಿ ಯಾಕೆ ಬಳಕೆ ಮಾಡುತ್ತಿದ್ದಾರೆ?. ಬಹುಮತದ ಸರಕಾರಗಳ ಶಾಸಕರ ಖರೀದಿ ಮಾಡಲಾಗುತ್ತಿದೆ. ಕರ್ನಾಟಕ, ಮಣಿಪುರ, ಗೋವಾ, ಉತ್ತರಾಖಂಡ ಎಲ್ಲ ಕಡೆ ಈ.ಡಿ. ಪ್ರಯೋಗ ಮಾಡಿ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಖರೀದಿ, ಎಷ್ಟರ ಮಟ್ಟಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಪ್ರಕಾರ ಬದ್ಧವಾಗಿದೆ ಎಂಬುದನ್ನು ತಿಳಿಸಲಿ ಎಂದು ಅವರು ಸವಾಲು ಹಾಕಿದರು.
ನಿನ್ನದು ಯಾವುದಪ್ಪಾ ಗ್ಯಾರಂಟಿ?: ಜಾಹೀರಾತುಗಳಲ್ಲಿ ಪ್ರಧಾನಿ ಮೋದಿ ನನ್ನ ಗ್ಯಾರಂಟಿ ಎನ್ನುತ್ತಿದ್ದಾರೆ. ನಿನ್ನದು ಯಾವುದಪ್ಪಾ ಗ್ಯಾರಂಟಿ. ಕೆಲಸ ಮಾಡೋದು ದೇಶದ ಸರಕಾರದ ಜವಾಬ್ದಾರಿ. ಬಿಜೆಪಿ ಸರಕಾರದ ಗ್ಯಾರಂಟಿ, ಭಾರತ ಸರಕಾರದ ಗ್ಯಾರಂಟಿ ಎಂದಾದರೂ ಹೇಳಿ. ಅದನ್ನು ಬಿಟ್ಟು ‘ಮೇರಿ ಗ್ಯಾರಂಟಿ’ ಎನ್ನುತ್ತಿದ್ದಾರೆ. ಹಣ ನನ್ನದು, ತೆರಿಗೆ ನಾನು ಪಾವತಿ ಮಾಡುತ್ತಿದ್ದೇನೆ. ಇದು ದೇಶದ ಗ್ಯಾರಂಟಿ, ಮೋದಿ ಗ್ಯಾರಂಟಿ ಅಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.