ಕಾನೂನು ಬಾಹಿರವಾಗಿ ವೈದ್ಯಕೀಯ ಸೀಟು ಹಂಚಿಕೆ : ಕೆಇಎಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು : ಕಾನೂನು ಬಾಹಿರವಾಗಿ ವೈದ್ಯಕೀಯ ಸ್ನಾತಕೋತ್ತರ ಪದವಿಯ ಸೀಟು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಡಾ. ಡಿ.ರಾಜೇಶ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜೆ.ಶಿವಶಂಕರೇಗೌಡ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಜೊತೆಗೆ ಪ್ರಕರಣದಲ್ಲಿ ಪ್ರತಿವಾದಿ ಹಾಗೂ ಕಾನೂನು ಬಾಹಿರವಾಗಿ ರೆಸ್ಪರೇಟರಿ ಇನ್ ಮೆಡಿಸನ್(ಉಸಿರಾಟಕ್ಕೆ ಸಂಬಂಧಿಸಿದ) ವಿಭಾಗದಲ್ಲಿ ಜೆ. ಪ್ರದೀಪ್ ಎಂಬುವರಿಗೆ ಹಂಚಿಕೆಯಾಗಿದ್ದ ಸೀಟನ್ನು ರದ್ದುಪಡಿಸಿ, ಅರ್ಜಿದಾರ ಡಾ.ಡಿ.ರಾಜೇಶ್ ಕುಮಾರ್ ಅವರಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಿರುವ ವಿಭಾಗೀಯ ಪೀಠ ಎರಡು ವಾರಗಳಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಸೂಚನೆ ನೀಡಿದೆ.
ದಾಖಲೆಗಳ ಪರಿಶೀಲನೆ ಬಳಿಕ ಅರ್ಜಿದಾರರು ಸೂಕ್ತ ಸಮಯಕ್ಕೆ ಎನ್‌ಒಸಿ ನೀಡಿಲ್ಲ ಎಂಬ ಕೆಇಎ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ. ದಾಖಲೆಗಳನ್ನು ಆರಂಭಿಕ ಹಂತದಲ್ಲಿಯೇ ಪೂರ್ಣಗೊಳಿಸಬೇಕು. ಎನ್‌ಒಸಿ ನೀಡಲಾಗಿದೆ ಎಂಬುದಾಗಿ ಪರಿಶೀಲಿಸಿದ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ರಸೀದಿ ಸಹ ನೀಡಲಾಗಿದೆ. ಆದರೆ, ಎನ್‌ಒಸಿ ನೀಡಿರುವುದು ಎಂಡಿ ಕೋರ್ಸ್‌ಗೆ ಅಲ್ಲ ಎಂಬ ಅಂಶವನ್ನು ಪ್ರಾರಂಭಿಕ ಹಂತದಲ್ಲಿ ತಿಳಿಸಬೇಕು. ಈ ಕುರಿತು ಮಾಹಿತಿ ನೀಡದಿದ್ದಲ್ಲಿ ಎಲ್ಲವೂ ಕ್ರಮಬದ್ಧವಾಗಿದೆ ಎಂಬ ಅಭಿಪ್ರಾಯವಿರಲಿದೆ ಎಂದು ಪೀಠ ತಿಳಿಸಿದೆ. ಅಲ್ಲದೆ, ಎನ್‌ಒಸಿ ದೋಷಪೂರಿತವಾಗಿದೆ ಎಂಬ ಅಂಶವನ್ನು ಪರಿಶೀಲಿಸಲು ಜಯದೇವ ಸಂಸ್ಥೆಯಿಂದ ಸ್ಪಷ್ಟೀಕರಣ ಪಡೆದುಕೊಳ್ಳಬಹುದಾಗಿತ್ತು. ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡದೆ ಸೀಟು ಹಂಚಿಕೆ ರದ್ದು ಮಾಡಿರುವುದು ಕಾನೂನು ಬಾಹಿರ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ ಕೆಇಎಗೆ 1 ಲಕ್ಷ ದಂಡ ವಿಧಿಸಿ ಆದೇಶಿಸಿದೆ.