ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಶೀಘ್ರದಲ್ಲಿಯೇ ಸಹಕಾರ ಕೃಷಿ ಪದ್ಧತಿ ಜಾರಿ: ಸಚಿವ ಎಚ್.ಸಿ.ಮಹದೇವಪ್ಪ

Update: 2023-08-09 18:20 GMT

ಎಚ್.ಸಿ.ಮಹದೇವಪ್ಪ- ಸಚಿವರು

ಬೆಂಗಳೂರು, ಆ.9: ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಶೀಘ್ರದಲ್ಲಿಯೇ ಸಹಕಾರ ಕೃಷಿ ಪದ್ಧತಿ ಜಾರಿಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ವಲಸೆ ಪ್ರಮಾಣ ತಗ್ಗಿಸಬೇಕಾಗಿದೆ.ಜೊತೆಗೆ, ಅಲ್ಲಿಯೇ ಉದ್ಯೋಗ ಸೃಷ್ಟಿಸುವ ಚಿಂತನೆ ಇದ್ದು, ಇದಕ್ಕಾಗಿ ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ ಕೃಷಿ ಗುಂಪುಗಳು ರಚನೆಯಾಗಲಿವೆ. ಹಲವರು ಒಗ್ಗೂಡಿ ಸಹಕಾರ ಪದ್ಧತಿಯಡಿ ಕೃಷಿ ಮಾಡಿದರೆ ಆಹಾರ ಉತ್ಪಾದನೆಯ ಪ್ರಮಾಣ ಮಾತ್ರವಲ್ಲದೆ, ಅವರ ಆದಾಯವೂ ಹೆಚ್ಚುತ್ತದೆ. ಆ ಮೂಲಕ ಗ್ರಾಮೀಣ ಪ್ರದೇಶಗಳ ಆರ್ಥಿಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

ಪ್ರತಿ ಹಳ್ಳಿಯಲ್ಲಿ ನಿರ್ದಿಷ್ಟ ಪ್ರಮಾಣದ ಜನ ಒಗ್ಗೂಡಿ ಇಂತಹ ಗುಂಪುಗಳನ್ನು ರಚಿಸಿಕೊಂಡರೆ ಲಭ್ಯವಾಗುವ ಭೂಮಿಯ ಪ್ರಮಾಣವೂ ಹೆಚ್ಚಿರುತ್ತದೆ. ಕೃಷಿ ಕೆಲಸವೂ ಸುಲಭವಾಗುತ್ತದೆ. ರಾಜ್ಯದಲ್ಲಿ ಸಣ್ಣ ಹಿಡುವಳಿದಾರರ ಪ್ರಮಾಣ ಹೆಚ್ಚಿದ್ದು, ಲಭ್ಯವಿರುವ ಭೂಮಿಯಲ್ಲಿ ನಿರೀಕ್ಷಿತ ಮಟ್ಟದ ಕೃಷಿ ಮಾಡಲು ಜನರಿಗೆ ಸಾಧ್ಯವಾಗುತ್ತಿಲ್ಲ.ಹೀಗಾಗಿ ಹಲವರು ಒಗ್ಗೂಡಿ ಕೃಷಿ ಸಹಕಾರ ಗುಂಪುಗಳನ್ನು ರಚಿಸಿಕೊಂಡರೆ ಕೃಷಿಗೆ ಬಲ ಬರುತ್ತದೆ. ಆ ಮೂಲಕ ಅವರ ಆರ್ಥಿಕ ಶಕ್ತಿಯೂ ಹೆಚ್ಚುತ್ತದೆ. ಹಲವರು ಒಗ್ಗೂಡಿ ಕೃಷಿ ಕೆಲಸಕ್ಕೆ ತೊಡಗುವುದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ ಎಂದರು.

ರಾಜ್ಯಾದ್ಯಂತಸಹಕಾರ ಪದ್ಧತಿಯಡಿ ಕೃಷಿ ಮಾಡಲು ಲಭ್ಯವಾಗಬಹುದಾದ ಭೂಮಿ ಮತ್ತು ಗುಂಪುಗಳನ್ನು ಅಂದಾಜಿಸಲು ಮತ್ತು ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿಗಳಿಗೆ ಮತ್ತು ಇಲಾಖೆಯ ಉನ್ನತಾಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಿದ್ದು ಸಹಕಾರಿ ಪದ್ಧತಿಯಡಿ ಕೃಷಿ ಮಾಡುವ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆಗಳ ಕುರಿತು ವರದಿ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇನ್ನೂ, ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರ 1.67 ಎಕರೆಯಷ್ಟು ಭೂಮಿ ಇದ್ದರೆ 5 ಮಂದಿಯ ಕುಟುಂಬ ಜೀವನ ನಿರ್ವಹಣೆ ಮಾಡಬಹುದು. ಸ್ವಂತ ಭೂಮಿ ಇರುವವರು ಒಗ್ಗೂಡಿ ಗುಂಪುಗಳನ್ನು ರಚಿಸುವುದು ಒಂದು ಭಾಗವಾದರೆ, ಸ್ವಂತ ಭೂಮಿ ಇಲ್ಲದವರಿಗೆ ಸರಕಾರ ಭೂಮಿ ಒದಗಿಸಿ ಸಹಕಾರಿ ಪದ್ಧತಿಯಡಿ ಕೃಷಿ ಮಾಡಲು ಅನುಕೂಲ ಮಾಡಿಕೊಡಲಿದೆ ಎಂದು ಸಚಿವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News