ರಫ್ತಿಗೆ ಉತ್ತೇಜನ ನೀಡುವಂತಹ ಹೊಸ ಕೈಗಾರಿಕಾ ನೀತಿ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಉದ್ಯಮಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ, ರಫ್ತಿಗೆ ಉತ್ತೇಜನ ನೀಡುವಂತಹ ಹೊಸ ಕೈಗಾರಿಕಾ ನೀತಿಯನ್ನು ರಾಜ್ಯ ಸರಕಾರವು ತ್ವರಿತವಾಗಿ ಜಾರಿಗೆ ತರಲಿದೆ. ರಫ್ತು ಚಟುವಟಿಕೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು ನಂತರ ಮೂರನೆ ಸ್ಥಾನದಲ್ಲಿರುವ ಕರ್ನಾಟಕವು ಮೊದಲನೆ ಸ್ಥಾನಕ್ಕೆ ಏರಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕೌಶಲ್ಯವುಳ್ಳ ಕಾರ್ಮಿಕರಿದ್ದರೆ ಕೈಗಾರಿಕಾ ಬೆಳವಣಿಗೆಗೆ ಅನುಕೂಲ ಎಂಬ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಾರಂಭಿಸಲಾಗಿತ್ತು. ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಆಗಬೇಕು ಎನ್ನುವ ಆಶಯವನ್ನು ಸರಕಾರ ಹೊಂದಿದೆ. ಉದ್ಯಮಿಗಳಿಗೆ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಬೆಂಬಲವನ್ನು ನೀಡಲಿದೆ. ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ದೇಶದ ಆರ್ಥಿಕತೆ ಬೆಳೆಯುತ್ತದೆ. ಜಿಡಿಪಿ ಬೆಳೆದರೆ ರಾಜ್ಯವು ಬೆಳೆಯುತ್ತದೆ, ರಾಷ್ಟ್ರದ ಜಿಡಿಪಿಗೆ ದೊಡ್ಡ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಹೂಡಿಕೆಗಳು ಬರುತ್ತವೆ. ಹೂಡಿಕೆಗಳು ಬಂದಲ್ಲಿ ಕೈಗಾರಿಕೆಗಳು ಬಂದು ನಿರುದ್ಯೋಗ ನಿವಾರಣೆಯಾಗುತ್ತದೆ. ಕರ್ನಾಟಕದಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಲ್ಪಿಸಲಾಗುವುದು. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದು ಅವರು ತಿಳಿಸಿದರು.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ: ಸರಕಾರ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಯುವನಿಧಿ ಯಡಿಯಲ್ಲಿ 2022-23ರಲ್ಲಿ ಪದವೀಧರರಾಗಿ ನಿರುದ್ಯೋಗಿ ಗಳಾಗಿರುವವರಿಗೆ ಮೂರು ಸಾವಿರ ರೂ.ಗಳ ನಿರುದ್ಯೋಗ ಭತ್ತೆಯನ್ನು ನೀಡಲಾಗುವುದು. ಡಿಪ್ಲೋಮಾ ಹೊಂದಿದವರಿಗೂ 1500 ರೂ.ಗಳ ಭತ್ತೆಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಕೌಶಲ್ಯ ಇಲಾಖೆಯಿಂದ ಕೈಗಾರಿಕೆಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ತಯಾರು ಮಾಡುವ ಸಲುವಾಗಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾರುಕಟ್ಟೆಗೆ ಸೂಕ್ತವಾಗಿರುವ ಉದ್ಯೋಗಿಗಳನ್ನು ತಯಾರು ಮಾಡಿದರೆ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ಇಂದು 68 ಉದ್ದಿಮೆಗಳಿಗೆ ‘ಶ್ರೇಷ್ಠ ರಫ್ತುದಾರ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. 1992-93ರಿಂದ ಈ ಪ್ರಶಸ್ತಿಗಳನ್ನು ನೀಡುವ ಪರಿಪಾಠವಿದೆ ಎಂದು ಅವರು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕದಲ್ಲಿರುವ ಎಂಜಿನಿಯರಿಂಗ್, ವೈದ್ಯಕೀಯ, ಇತರೇ ವೃತ್ತಿಪರ ಶಿಕ್ಷಣ ನೀಡುವ ಕಾಲೇಜುಗಳು ಇಡೀ ದೇಶಕ್ಕೆ ಮಾದರಿ. ಇಡೀ ದೇಶಕ್ಕೆ ಹೆಚ್ಚು ವೈದ್ಯರನ್ನು ನೀಡುವ ರಾಜ್ಯ ನಮ್ಮದು. ರಾಜ್ಯದ ಅತ್ಯುತ್ತಮ ಎಂಜಿನಿಯರ್‍ಗಳು ವಿದೇಶಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮ ದಕ್ಷಿಣ ಭಾರತದಲ್ಲಿ ಕರ್ನಾಟಕ ಉದ್ದಿಮೆಗಳಿಗೆ ಅತ್ಯುತ್ತಮ ಜಾಗ. ನಮ್ಮಲ್ಲಿರುವ ವಾತಾವರಣ, ಕಾನೂನು ಸುವ್ಯವಸ್ಥೆ ಸೇರಿದಂತೆ ಉದ್ದಿಮೆ ಸ್ನೇಹಿ ನೀತಿಗಳಿಂದ ಅಂತರ್‍ರಾಷ್ಟ್ರೀಯ ಉದ್ಯಮಗಳು ನಮ್ಮಲ್ಲಿ ಬರುತ್ತಿವೆ. ರಾಜ್ಯ ಐಟಿ ಕ್ಷೇತ್ರದಲ್ಲಿ ಈಗಲೂ ಮೊದಲನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ಸ್ಥಳೀಯವಾಗಿ ಉದ್ಯೋಗ ದೊರೆತರೆ ವಲಸೆ ಕಡಿಮೆಯಾಗುತ್ತದೆ, ಆರ್ಥಿಕ, ಪ್ರಾದೇಶಿಕ ಅಸಮಾನತೆ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡನೆ ಮತ್ತು ಮೂರನೆ ಹಂತದ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ನೀಡಲಾಗುವುದು. ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆ ಮಾಡಬೇಕು. ರಾಜ್ಯದ ಅನಿವಾಸಿ ಭಾರತೀಯತರಿಗೆ ಪ್ರತ್ಯೇಕ ವಿಭಾಗ ಆರಂಭಿಸುತ್ತೇವೆ. ಉದ್ಯಮಿಗಳು ಬೆಟರ್ ಬೆಂಗಳೂರು, ಬ್ರ್ಯಾಂಡ್ ಬೆಂಗಳೂರಿಗೆ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಚುರುಕಾಗಿ ನಡೆಯಬೇಕಿದ್ದು, ಈ ನಿಟ್ಟಿನಲ್ಲಿ ದಾಪುಗಾಲಿಡಲು ನಿರ್ಧರಿಸಿದ್ದೇವೆ. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಬಲ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ‘ಕಾಮನ್ ಫೆಸಿಲಿಟೀಸ್ ಸೆಂಟರ್'ಗಳನ್ನು ಸ್ಥಾಪಿಸಲು ಟಾಟಾ ಕನ್ಸಲ್ಟೆನ್ಸಿ ಜತೆ ವಿಚಾರ ವಿನಿಮಯ ನಡೆಸಲಾಗಿದೆ. ಇದರಲ್ಲಿ ಆ ಸಂಸ್ಥೆ ಶೇ.70 ಮತ್ತು ರಾಜ್ಯ ಸರಕಾರ ಶೇ.30ರಷ್ಟು ಬಂಡವಾಳ ಹೂಡಲಿದೆ ಎಂದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕಾರ್ಯವಿಧಾನವನ್ನು ಸಂಪೂರ್ಣ ಪಾರದರ್ಶಕವನ್ನಾಗಿ ಮಾಡಿ, ಉದ್ಯಮಿಗಳು ಸುಗಮವಾಗಿ ತಮ್ಮ ಚಟುವಟಿಕೆ ನಡೆಸುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಈಗಾಗಲೇ ಭಾರೀ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಏಳು ಆದ್ಯತಾ ವಲಯಗಳನ್ನು ಗುರುತಿಸಿ, ವಿಷನ್ ಗ್ರೂಪ್ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
12 ವಿಭಾಗಗಳ ಅಡಿಯಲ್ಲಿ ಒಟ್ಟು 68 ಉದ್ಯಮಿಗಳಿಗೆ 2017-18, 2018-19 ಮತ್ತು 2019-20ನೇ ಸಾಲಿನ ಪ್ರಶಸ್ತಿ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಬಯೋಕಾನ್, ಟೊಯೋಟಾ ಕಿರ್ಲೋಸ್ಕರ್, ಎಚ್‍ಎಎಲ್, ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್, ಜಿ.ಇ.ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗೋಕುಲ್‍ದಾಸ್ ಎಕ್ಸ್ಪೋರ್ಟ್ಸ್ ಮುಂತಾದ ಕಂಪೆನಿಗಳ ಪ್ರತಿನಿಧಿಗಳು ಪುರಸ್ಕಾರಗಳನ್ನು ಸ್ವೀಕರಿಸಿದರು.