ಸೆ.6 ರಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-09-01 10:32 GMT

ಬೆಂಗಳೂರು : "ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಸೆ.6ರ ಗೌರಿ ಹಬ್ಬದಂದು ಉದ್ಘಾಟನೆ ಮಾಡಲಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಗಳು ಈ ಯೋಜನೆಯನ್ನು ಎದುರುನೋಡುತ್ತಿವೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಮೊನ್ನೆಯಷ್ಟೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೆ" ಎಂದು ತಿಳಿಸಿದರು.

"ಈ ಯೋಜನೆಗಳ ವಿಚಾರವಾಗಿ ಅನೇಕ ಟೀಕೆಗಳು ಬರುತ್ತಿದ್ದವು. ಟೀಕೆಗಳು ಬರಲಿ. ಈ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಈ ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿಯಲಿವೆ. ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ. ಯೋಜನೆಯ 7 ವಿಯರ್ ಗಳು ನೀರನ್ನು ಎತ್ತುತ್ತಿವೆ. ಈ ತಿಂಗಳ 6 ರಂದು ಉದ್ಘಾಟನೆಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ" ಎಂದು ತಿಳಿಸಿದರು.

"ಈ ಯೋಜನೆಯ ಫಲಾನುಭವಿ ಜಿಲ್ಲೆಯ ಜನರು ನೀರನ್ನು ಎತ್ತುವ ದೃಶ್ಯ ಕಣ್ತುಂಬಿಕೊಳ್ಳಬಹುದು. ಅಲ್ಲಿ ಜಾಗ ಕಿರಿದಾಗಿದ್ದರೂ, ಪೊಲೀಸರಿಗೆ ಹೇಳಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲ ನಾಯಕರು, ರೈತರಿಗೆ ಆಹ್ವಾನಿಸಲಾಗುವುದು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನ ನೀಡುವಂತೆ ನನ್ನ ಕಚೇರಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಪವಿತ್ರವಾದ ಕಾರ್ಯಕ್ಕೆ ಬಂದು ಶುಭ ಗಳಿಗೆಗೆ ಸಾಕ್ಷಿಯಾಗಬೇಕು ಎಂದು ಮನವಿ ಮಾಡುತ್ತೇನೆ" ಎಂದು ತಿಳಿಸಿದರು.

ನ್ಯಾ.ಕುನ್ಹಾ ಅವರ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ ; 

ಕೋವಿಡ್ ಸಮಯದಲ್ಲಿನ ಅಕ್ರಮದ ಬಗ್ಗೆ ನ್ಯಾ.ಕುನ್ಹಾ ಅವರ ಸಮಿತಿ ವರದಿ ಸಲ್ಲಿಕೆ ಹಾಗೂ ಮಾಜಿ ಸಚಿವ ಸುಧಾಕರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಕುನ್ಹಾ ಅವರ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಸುಧಾಕರ್ ಅವರ ಹೇಳಿಕೆಯ ಬಗ್ಗೆಯೂ ಮಾಹಿತಿ ಇಲ್ಲ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ. ಈ ವಿಚಾರವಾಗಿ ಸರ್ಕಾರದ ವಕ್ತಾರರು ಪ್ರತಿಕ್ರಿಯೆ ನೀಡುತ್ತಾರೆ" ಎಂದು ತಿಳಿಸಿದರು.

ರಾಜಭವನದಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಯಾವುದೇ ಅರ್ಜಿ ಇಲ್ಲ ಎಂದು ರಾಜ್ಯಪಾಲರು ಹೇಳಿದ್ದು, ಹಾಗಾದರೆ ಫೈಲ್ ಗಳು ಏನಾದವು ಎಂದು ಕೇಳಿದಾಗ, "ನಮಗೂ ಅದೇ ಯಕ್ಷಪ್ರಶ್ನೆಯಾಗಿದೆ. ನಾಳೆ ಈ ವಿಚಾರವಾಗಿ ಮಾಹಿತಿ ಪಡೆಯುತ್ತೇವೆ. ನಾವು ನಮಗೆ ಬಂದಿರುವ ಮಾಹಿತಿಗಳ ಮೇರೆಗೆ ನಮ್ಮ ಮನವಿ ಸಲ್ಲಿಸಿದ್ದೇವೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News