ಸೌರ ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದ ಸಹಾಯಧನ ಶೇ.50ಕ್ಕೆ ಹೆಚ್ಚಳ: ಸಚಿವ ಕೆ.ಜೆ.ಜಾರ್ಜ್

Update: 2024-03-06 14:14 GMT

Photo :X/@thekjgeorge

ಬೆಂಗಳೂರು: ರೈತರು ಕೃಷಿ ಚಟುವಟಿಕೆಗಳಿಗಾಗಿ ಸೌರ ಪಂಪ್ ಸೆಟ್ ಅಳವಡಿಕೆಯನ್ನು ಉತ್ತೇಜಿಸಲು ರಾಜ್ಯ ಸರಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ.30 ರಷ್ಟು ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ‘ರೈತ ಸೌರ ಶಕ್ತಿ ಮೇಳ’ದ ಅಂಗವಾಗಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಮಾರಂಭದಲ್ಲಿ ಮಾತನಾಡಿದ ಅವರು, ʻಸೌರ ಪಂಪ್ ಸೆಟ್ ಅಳವಡಿಕೆಗೆ ಕೇಂದ್ರ ಸರಕಾರವು ಶೇ.30ರಷ್ಟು ಸಹಾಯಧನ ನೀಡುತ್ತಿದೆ. ಈಗ ರೈತರು ಒಟ್ಟಾರೆ ಮೊತ್ತದಲ್ಲಿ ಶೇ.20ರಷ್ಟು ಮಾತ್ರ ಭರಿಸಬೇಕಾಗುತ್ತದೆ. ಈ ಯೋಜನೆಯಡಿ ರೈತರಿಗೆ ಪಂಪ್, ಮೀಟರ್ ಹಾಗೂ ಪೈಪ್‍ಗಳನ್ನು ಒದಗಿಸಲಾಗುವುದುʻ ಎಂದರು.

ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು. ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್ ಸೆಟ್ ಬಳಕೆಯೇ ಪರಿಹಾರ. ಈ ಸಂಬಂಧ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಮಾ.9ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ‘ರೈತ ಸೌರಶಕ್ತಿ ಮೇಳ'ವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ಜಾರ್ಜ್ ಹೇಳಿದರು.

ನಮ್ಮ ಸರಕಾರ ‘ಕುಸುಮ್ ಬಿ’ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ನವೀನ ಮಾದರಿಯ ಸೌರ ಪಂಪ್‍ಸೆಟ್‍ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಈ ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಸೌರ ಪಂಪ್‍ಸೆಟ್‍ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದು ಅವರು ತಿಳಿಸಿದರು.

ಬೆಸ್ಕಾಂ ವ್ಯಾಪ್ತಿಯಲ್ಲಿ ‘ಕುಸುಮ್ ಸಿ' ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳಲ್ಲಿರುವ ವಿವಿಧ ವೋಲ್ಟೇಜ್ ವರ್ಗಗಳ ಹೊಸ ಸಬ್‍ಸ್ಟೇಷನ್‍ಗಳಿಗೂ ಮುಖ್ಯಮಂತ್ರಿ ಇದೇ ವೇಳೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಹಲವು ಸಚಿವರು ಮೇಳದಲ್ಲಿ ಭಾಗಿಯಾಗಲಿದ್ದಾರೆ ಎಂದು ಜಾರ್ಜ್ ಮಾಹಿತಿ ನೀಡಿದರು.

ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ:

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ಇಂಧನ ಇಲಾಖೆಯು ಸ್ಥಾಪಿತವಾಗಲಿರುವ ಗ್ರೀನ್ ಹೈಡ್ರೋಜನ್ ಉತ್ಪಾದನಾ ಘಟಕ, ಹೆಚ್ಚಿನ ಸಾಮರ್ಥ್ಯದ ಸೌರ ಮತ್ತು ಪವನ ಘಟಕಗಳನ್ನು ಅವಲಂಬಿಸಿದೆ ಎಂದು ಅವರು ಹೇಳಿದರು.

ಕೆಪಿಟಿಸಿಎಲ್ ಮೂಲಸೌಕರ್ಯವನ್ನು ಬಲಪಡಿಸುವ ವಿನೂತನ ಯೋಜನೆಯನ್ನು ಹೊಂದಿದೆ. ಆದರೆ, ಈ ಯೋಜನೆಗೆ ಅಗತ್ಯವಿರುವ ಬಂಡವಾಳ ಹಗೂ ಬೆಂಗಳೂರು ನಗರದೊಳಗೆ ಭೂಮಿಯ ಲಭ್ಯತೆ ಪ್ರಮುಖ ಸವಾಲಾಗಿದೆ. ಕೆಪಿಟಿಸಿಎಲ್ ತನ್ನದೆ ಬಂಡವಾಳ ಬಳಸಿದ್ದಲ್ಲಿ ಇದರ ಹೊರೆ ವಿದ್ಯುತ್ ಬೆಲೆ ಏರಿಕೆಯ ಮುಖಾಂತರ ಗ್ರಾಹಕರ ಮೇಲೆ ಬೀಳುತ್ತದೆ ಎಂದು ಜಾರ್ಜ್ ತಿಳಿಸಿದರು.

ಆದುದರಿಂದ, ಕೆಪಿಟಿಸಿಎಲ್ ಈ ಯೋಜನೆಯನ್ನು ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಉದ್ದೇಶಿಸಿದೆ. ಇದರಿಂದ ಉದ್ಯೋಗಾವಕಾಶವು ಹೆಚ್ಚಲಿದೆ. ಗ್ಯಾಸ್ ಇನ್ಸುಲೇಟೆಡ್ ಸಬ್ ಸ್ಟೇಷನ್(ಜಿಐಎಸ್)ಗಳಿಗೆ ಏರ್ ಇನ್ಸುಲೇಟೆಡ್ ಸಬ್ ಸ್ಟೇಷನ್(ಎಐಎಸ್)ಗಳಿಗಿಂತ ಶೇ.70ರಷ್ಟು ಕಡಿಮೆ ಪ್ರಮಾಣದಲ್ಲಿ ಭೂಮಿ ಬಳಕೆಯಾಗಲಿದೆ. ನಿರ್ವಹಣ ವೆಚ್ಚವು ಕಡಿಮೆ, ನಿರ್ಮಾಣದ ಸಮಯವು ಕಡಿಮೆ ಹಾಗೂ ಹೆಚ್ಚು ಸುರಕ್ಷಿತವಾಗಿರಲಿದೆ ಎಂದು ಅವರು ಹೇಳಿದರು.

ಈ ಯೋಜನೆಯ ಕುರಿತು ಸರಕಾರದ ಮಟ್ಟದಲ್ಲಿ ಇನ್ನೂ ಯಾವುದೆ ತೀರ್ಮಾನವಾಗಿಲ್ಲ. ಮೊದಲು ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು, ಸ್ಟೇಕ್ ಹೋಲ್ಡರ್ಸ್‍ಗಳ ಅಭಿಪ್ರಾಯ ಸಂಗ್ರಹಿಸಿ ಮುಂದುವರೆಯಲು ನಿರ್ಧರಿಸಲಾಗಿದೆ. ಭೂಮಿಯ ಒಳಗಡೆ ಟ್ರಾನ್ಸ್‍ಫಾರ್ಮರ್ ಗಳ ಅಳವಡಿಕೆ ಮಾಡುತ್ತಿರುವ ದೇಶದ ಮೊದಲ ರಾಜ್ಯ ನಮ್ಮದು. ಬೃಹತ್ ಸೋಲಾರ್ ಪಾರ್ಕ್ ಸ್ಥಾಪನೆಯಲ್ಲಿ ಈಗ ನಾವು ದೇಶದಲ್ಲೆ ಮೂರನೆ ಸ್ಥಾನದಲ್ಲಿದ್ದೇವೆ ಎಂದು ಜಾರ್ಜ್ ತಿಳಿಸಿದರು.

ಸಮಾರಂಭದಲ್ಲಿ ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ, ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News