ಹಾಲು ಉತ್ಪಾದಕರಿಗೆ ಸಹಾಯಧನ ಏರಿಕೆ ಬಗ್ಗೆ ಶೀಘ್ರ ನಿರ್ಧಾರ: ಸಚಿವ ಕೆ.ಎನ್.ರಾಜಣ್ಣ
ಮೈಸೂರು, ಜು.8: ಹಾಲು ಉತ್ಪಾದಕರಿಗೆ ಸಹಾಯಧನ ಏರಿಕೆ ಮಾಡುವ ಚಿಂತನೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಅಮುಲ್ ಜತೆಗೆ ನಂದಿನಿ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ.ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ಅತ್ಯಂತ ಸೂಕ್ಷ್ಮ ವಿಚಾರ. ಇದು ಭಾವನಾತ್ಮಕ ವಿಚಾರ ಕೂಡ. ಹಸು ಕಡಿಯಬೇಕು ಎಂದು ಹೇಳುವುದಿಲ್ಲ. ಕಡಿಯಬಾರದು ಎಂದೂ ಹೇಳುವುದಿಲ್ಲ. ಆದರೆ, ರೈತರ ಅನುಕೂಲಕ್ಕೆ ತಕ್ಕಂತೆ ಕಾಯ್ದೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಪ್ರತೀ ಗ್ರಾಮ ಪಂಚಾಯತ್ ನಲ್ಲೊಂದು ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸುವ ಗುರಿ ಇದೆ. ಇದೇ ವರ್ಷದ ಡಿಸೆಂಬರ್ ಒಳಗೆ ಎಲ್ಲ ಪಂಚಾಯತ್ ಗಳಲ್ಲೂ ಸಹಕಾರ ಸಂಘ ಸ್ಥಾಪನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಮೂರು, ನಾಲ್ಕು ಪಂಚಾಯತ್ಗಳಿಗೆ ಒಂದರಂತೆ ಸಹಕಾರ ಸಂಘ ಇದ್ದವು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತ್ಗೆ ಒಂದರಂತೆ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
'ಸಹಕಾರ ಇಲಾಖೆ ಜನಸಾಮಾನ್ಯರ ಇಲಾಖೆಯಾಗಬೇಕು. ಇಂದಿನ ಯುವ ಪೀಳಿಗೆ ಹೆಚ್ಚು ಹೆಚ್ಚು ಸಹಕಾರ ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದ ಬದುಕು ನಡೆಸಬೇಕು. ಸಹಕಾರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಎಲ್ಲ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ'
-ಕೆ.ಎನ್.ರಾಜಣ್ಣ , ಸಹಕಾರ ಸಚಿವ