ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ, ಸಿಎಂ ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರಕ್ಕೆ ಖಂಡನೆ : ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟನೆಗಳಿಂದ ಪ್ರತಿಭಟನಾ ಸಭೆ

Update: 2024-11-07 16:38 GMT

ಹೊಸದಿಲ್ಲಿ : ಕರ್ನಾಟಕಕ್ಕೆ ಜಿಎಸ್‍ಟಿ ಹಣ ನೀಡದೆ ವಂಚನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಾದ ಈ.ಡಿ, ಸಿಬಿಐ, ಐಟಿಯನ್ನು ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಗುರುವಾರ ದಿಲ್ಲಿ ಕರ್ನಾಟಕ ಸಂಘದ ಕಚೇರಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅಹಿಂದ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.

ಈ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ದೇಶದಲ್ಲೆ ಅತಿ ಹೆಚ್ಚು ತೆರಿಗೆಯನ್ನು ಸಂದಾಯ ಮಾಡುವ ಕರ್ನಾಟಕಕ್ಕೆ ತೆರಿಗೆ ಪಾಲನ್ನು ನ್ಯಾಯಯುತವಾಗಿ ನೀಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತಾರತಮ್ಯ ಎಸಗುತ್ತಿದೆ. ಅಲ್ಲದೇ, ತನ್ನ ರಾಜಕೀಯ ವಿರೋಧಿಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಷಡ್ಯಂತ್ರಗಳನ್ನು ನಡೆಸಿ ಸರಕಾರಗಳನ್ನು ಅಸ್ಥಿರಗೊಳಿಸುವಂತಹ ಷಡ್ಯಂತ್ರವನ್ನು ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‍ಟಿ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಯಾವ ದೇಶದಲ್ಲೂ ಜನರು ತಮ್ಮ ಆದಾಯದಲ್ಲಿನ ಶೇ.30ರಷ್ಟು ಪಾಲನ್ನು ತೆರಿಗೆ ರೂಪದಲ್ಲಿ ನೀಡುವುದಿಲ್ಲ. ಕೇಂದ್ರ ಸರಕಾರ ತೆರಿಗೆ ಹೆಸರಿನಲ್ಲಿ ಜನರನ್ನು ಲೂಟಿ ಮಾಡುತ್ತಿದೆ. ಜೊತೆಗೆ, ರಾಜ್ಯಗಳಿಗೆ ತೆರಿಗೆಯಲ್ಲಿ ನ್ಯಾಯಯುತವಾದ ಪಾಲು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಇದು ಕರ್ನಾಟಕದ ಪ್ರಮುಖ ಬುದ್ಧಿಜೀವಿಗಳು, ಚಿಂತಕರು, ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು, ಅಹಿಂದ ಸಂಘಟನೆಗಳ ಮುಖಂಡರು ಕರ್ನಾಟಕದಿಂದ ದಿಲ್ಲಿಗೆ ಬಂದು ಕನ್ನಡಿಗರು ಮತ್ತು ಕರ್ನಾಟಕದ ವಿರುದ್ಧ ಕೇಂದ್ರ ಸರಕಾರ ಏಕ ಪಕ್ಷೀಯವಾಗಿ ಅನಾದರ ತೋರುತ್ತಿರುವುದರ ವಿರುದ್ಧ ಮೊದಲ ಹಂತದ ಪ್ರತಿಭಟನೆಯಾಗಿದೆ ಎಂದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕೇಂದ್ರ ಸರಕಾರವು ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರಕಾರ, ಜಾರ್ಖಂಡ್‍ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದಾಗಲೇ ನಾವೆಲ್ಲ ಧ್ವನಿ ಎತ್ತಬೇಕಿತ್ತು. ಜೊತೆಗೆ ತೆರಿಗೆ ಪಾಲು ಕೇಳುವುದು ರಾಜ್ಯಗಳ ಹಕ್ಕು, ಅದು ಕೇಂದ್ರ ಸರಕಾರ ನೀಡುವ ದಾನ ಅಲ್ಲ ಎಂಬುದನ್ನು ಆಡಳಿತದಲ್ಲಿರುವವರಿಗೆ ಮನದಟ್ಟು ಮಾಡಬೇಕು ಎಂದು ಕರೆ ನೀಡಿದರು.

ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕೇಂದ್ರ ಸರಕಾರವು ತೆರಿಗೆ ಪಾಲು ಹಂಚಿಕೆ ವಿಚಾರದಲ್ಲಿ ದಕ್ಷಿಣದ ರಾಜ್ಯಗಳನ್ನು ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಈ ವಿಚಾರದಲ್ಲಿ ಧ್ವನಿ ಎತ್ತಿವೆ. ಕೇಂದ್ರ ಸರಕಾರ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ನಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ, ದಕ್ಷಿಣದ ರಾಜ್ಯಗಳ ಜನರೆಲ್ಲ ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಡಾ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡಲಾಗುತ್ತಿದೆ. ಪ್ರಜಾಸತ್ತಾತ್ಮಕವಾಗಿ ಬಹುಮತ ಪಡೆದು ರಚನೆಯಾಗಿರುವ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನ ಸರಿಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಲಿದೆ ಎಂದು ಲೋಹಿಯಾ ವಿಚಾರ ವೇದಿಕೆಯ ಬಿ.ಎಸ್.ಶಿವಣ್ಣ ಹೇಳಿದರು.

ಸಭೆಯಲ್ಲಿ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕಾಳೇಗೌಡ ನಾಗವಾರ, ಡಾ.ಲೀಲಾ ಸಂಪಿಗೆ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಹಲೋ ಮೈಸೂರ್ ಪ್ರಾದೇಶಿಕ ದಿನಪತ್ರಿಕೆ ಸಂಪಾದಕ ಟಿ.ಗುರುರಾಜ್, ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮಾಜಿ ಸಚಿವ ಎಂ.ಶಿವಣ್ಣ, ಆರ್.ಸ್ವಾಮಿ ಆನಂದ್, ಪ್ರಗತಿಪರ ಚಿಂತಕ ರುದ್ರಪ್ಪ ಹನಗವಾಡಿ, ರೆಸ್ಪಾನ್ಸಿಬಲ್ ಸಿಟಿಝನ್ಸ್ ವಾಯ್ಸ್ ಫೋರಂ ರಾಜ್ಯಾಧ್ಯಕ್ಷ ಎಫ್.ಎಂ.ಕಲೀಂ, ಕಾಂಗ್ರೆಸ್ ಮುಖಂಡ ಜೆ.ಜೆ.ಆನಂದ್, ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್, ಅಹಿಂದ ಸಂಘಟನೆಗಳ ಪ್ರತಿನಿಧಿಗಳಾದ ಮೊಗಣ್ಣಚಾರ್, ಎನ್.ಆರ್.ಸಿದ್ದು, ಲೋಕೇಶ್ ಕುಮಾರ್, ಡಿಎಸ್‍ಎಸ್ ಸಂಚಾಲಕ ದೇವಗಳ್ಳಿ ಸೋಮಶೇಖರ್, ಮಂಜುಳಾ ಮಂಜುನಾಥ್, ನಾಗರತ್ನ, ಮಹೇಂದ್ರ, ಮಹದೇವು, ಎನ್.ಆರ್.ನಾಗೇಶ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ನಿರ್ಣಯಗಳು: ಸಿದ್ದರಾಮಯ್ಯ ವಿರುದ್ಧದ ದ್ವೇಷ ರಾಜಕಾರಣವನ್ನೂ ತಕ್ಷಣವೇ ನಿಲ್ಲಿಸಬೇಕು. ಇಲ್ಲದೇ ಇದ್ದಲ್ಲಿ ದೊಡ್ಡ ಮಟ್ಟದಲ್ಲಿ ಲಕ್ಷಾಂತರ ಜನರು ಬಂದು ದಿಲ್ಲಿಗೆ ಮುತ್ತಿಗೆ ಹಾಕುವುದು. ಕೇಂದ್ರ ತನಿಖಾ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕೆ ದುರುಪಯೋಗ ಮಾಡುವುದನ್ನು ಸರಕಾರ ನಿಲ್ಲಿಸಬೇಕು. ರಾಷ್ಟ್ರಪತಿ ಮಧ್ಯಪ್ರವೇಶಿಸಿ ಸ್ವಾಯತ್ತ ಸಂಸ್ಥೆಗಳ ಸ್ವಾತಂತ್ರ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಕೇಂದ್ರ ಸರಕಾರವು ಕರ್ನಾಟಕ, ಕನ್ನಡ, ಕನ್ನಡಿಗರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಆನಂತರ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News