‘ಹುಲಿ ಉಗುರುʼ ನೆಪದಲ್ಲಿ ಚಿನ್ನಾಭರಣ ವ್ಯಾಪಾರಿಗಳಿಗೆ ಕಿರುಕುಳ ನೀಡಿದರೆ ಪ್ರತಿಭಟನೆ: ಟಿ.ಎ.ಶರವಣ ಎಚ್ಚರಿಕೆ
ಬೆಂಗಳೂರು, ಅ. 28: ‘ಹುಲಿ ಉಗುರು ನೆಪದಲ್ಲಿ ಚಿನ್ನಾಭರಣ ವ್ಯಾಪಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಂಸಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಮುಂದುವರೆದರೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಲಾಗುವುದು’ ಎಂದು ಚಿನ್ನಾಭರಣ ವ್ಯಾಪಾರಿ ಸಂಘಟನೆಗಳ ಅಧ್ಯಕ್ಷ ಟಿ.ಎ.ಶರವಣ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಈ ಸಂಬಂಧ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಹುಲಿ ಉಗುರು, ಚರ್ಮ, ಸೇರಿ ವನ್ಯಜೀವಿ ಉತ್ಪನ್ನಗಳನ್ನು ಹೊಂದುವುದು ಅಪರಾಧ ಎಂಬ ಕಾಯಿದೆ ಬಗ್ಗೆ ಜನರಿಗೆ ಅರಿವಿಲ್ಲ ಎಂದು ಅರಣ್ಯ ಮಂತ್ರಿಯೆ ಹೇಳುತ್ತಾರೆ. ಈ ಬಗ್ಗೆ ಅರಿವು ಮೂಡಿಸುವ ಮುನ್ನವೇ ಅಧಿಕಾರಿಗಳು ಕೆಲ ರಾಜಕಾರಣಿಗಳು, ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸುವ ರೀತಿಯಲ್ಲಿ ಶೋಧ ನಡೆಸಿ ಭಯ ಹುಟ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಹುಲಿ ಉಗುರು ನೆಪದಲ್ಲಿ ದಾಳಿ ನಡೆಸಿದರೆ ಪ್ರಚಾರ ಸಿಗುತ್ತದೆ ಎನ್ನುವ ಪ್ರಚಾರದ ತೆವಲಿನಿಂದ ಈ ದಾಳಿ ನಡೆಸಲಾಗುತ್ತಿದೆ. ಚಿನ್ನಾಭರಣ ವ್ಯಾಪಾರಿಗಳ ಮೇಲೂ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ. ತುಮಕೂರಿನಲ್ಲಿ ಅಂಗಡಿ ಸಿಬ್ಬಂದಿಯನ್ನು ಬಲವಂತವಾಗಿ ಎಳೆದೊಯ್ದು ಹಿಂಸಿಸಿರುವುದು ಖಂಡನೀಯ ಎಂದು ಅವರು ಟೀಕಿಸಿದರು.
‘ಯಾವುದೇ ನೊಟೀಸ್ ನೀಡದೆ, ನಕಲಿ ಹುಲಿ ಉಗುರು ಆಗಿದ್ದರೂ ಅದನ್ನು ಪರಿಶೀಲಿಸದೆ ದಾಳಿ ನಡೆಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಮನೆಯ ಪೂರ್ವಿಕರು ಹುಲಿ ಉಗುರು ನೀಡಿದ್ದಾರೆ ಎನ್ನುವ ಸಮಜಾಯಿಷಿ ನೀಡಿದರೂ ಅದನ್ನು ಕೊಂಡೊಯ್ಯಲಾಗಿದೆ. ಹೀಗಾಗಿ ಸಿಎಂ ತಕ್ಷಣವೇ ಮಧ್ಯಪ್ರವೇಶಿಸಿ, ಚಿನ್ನಾಭರಣ ವ್ಯಾಪಾರಿಗಳಿಗೆ ಆಗುತ್ತಿರುವ ಕಿರುಕುಳ ನಿಲ್ಲಿಸಬೇಕು’ ಎಂದು ಅವರು ಕೋರಿದರು.