ಕರಾವಳಿ ಜಿಲ್ಲೆಗಳಲ್ಲಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ: ಸಚಿವ ಈಶ್ವರ್ ಖಂಡ್ರೆ ಅಭಿನಂದನೆ
ಬೆಂಗಳೂರು, ಸೆ.15: ‘ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶೇ.90ಕ್ಕೂ ಹೆಚ್ಚು ಜನರು ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶ ಮೂರ್ತಿಗಳನ್ನೆ ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದು, ಆ ಜಿಲ್ಲೆಗಳ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಇತರ ಜಿಲ್ಲೆಗಳ ಜನರೂ ಇದೇ ಪದ್ಧತಿ ಅನುಸರಿಸುವಂತೆ ಮನವಿ ಮಾಡುತ್ತೇನೆ’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಜೊತೆಯಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಅವರು ವರ್ಚುಯಲ್ ಸಭೆ ನಡೆಸಿದರು.
ಪರಿಸರದಿಂದ ಹುಟ್ಟಿದ ಗಣಪನಿಗೆ ಶ್ರದ್ಧಾ, ಭಕ್ತಿ ಸಮರ್ಪಿಸಲು, ಪರಿಸರ ಸ್ನೇಹಿಯಾದ ಗಣಪತಿ ಮೂರ್ತಿಗಳ ಪೂಜೆಯೆ ಸೂಕ್ತ ಪದ್ಧತಿ. ಗಣೇಶ ಚತುರ್ಥಿಯ ವ್ರತಕಥೆಯಲ್ಲಿ ಮಣ್ಣಿನ ಗಣೇಶನನ್ನು ಪೂಜಿಸಬೇಕು ನಂತರ ನೀರಿನಲ್ಲಿ ವಿಸರ್ಜಿಸಬೇಕು ಎಂಬ ಉಲ್ಲೇಖವಿದೆ ಎಂದು ಅವರು ಹೇಳಿದರು.
ಆದರೆ ಇಂದು ಪಿಓಪಿ ಗಣೇಶ ಮೂರ್ತಿಗಳನ್ನು ಪೂಜಿಸಿ, ನೀರಿನಲ್ಲಿ ವಿಸರ್ಜನೆ ಮಾಡಿದರೆ, ಅದು ನೀರಲ್ಲಿ ಕರಗದೆ ವಿರೂಪವಾಗುತ್ತದೆ ಜೊತೆಗೆ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತದೆ, ಇದು ಭಗವಂತನಿಗೆ ನಾವು ಮಾಡಿದ ಅಪಚಾರವೂ ಆಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಪರಿಸರ, ಪ್ರಕೃತಿ ಉಳಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಬೇಕು. ತಮ್ಮ ಮನೆಗಳಲ್ಲಿ ಪರಿಸರ ಸ್ನೇಹಿ ಗಣಪನನ್ನು ಪೂಜಿಸುವಂತೆ ಪಾಲಕರನ್ನು ಒತ್ತಾಯಿಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕ್ರಮ ವಹಿಸಿ ಎಂದು ಅವರು ಸಲಹೆ ಮಾಡಿದರು.
ಪರಿಸರ ಸ್ನೇಹಿ ಗಣಪನ ಪೂಜಿಸಲು ಮನವಿ: ಪಿಓಪಿ ಗಣಪತಿ ಮೂರ್ತಿಗಳನ್ನು ಮತ್ತು ರಾಸಾಯನಿಕ ಬಣ್ಣ ಲೇಪಿತ ಮೂರ್ತಿಗಳನ್ನು ಕೆರೆ, ಕಟ್ಟೆ, ನದಿ, ಬಾವಿಯಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತವಾಗುತ್ತದೆ. ಹೆಚ್ಚಿನ ಮಾಲಿನ್ಯವಾದಾಗ ಜಲಚರಗಳು ಸಾಯುತ್ತವೆ. ಈ ನೀರನ್ನು ಕುಡಿಯುವ ಜಾನುವಾರು ಮತ್ತು ಜನರ ಆರೋಗ್ಯದ ಮೇಲೂ ತೀವ್ರ ದುಷ್ಪರಿಣಾಮ ಆಗುತ್ತದೆ. ಹೀಗಾಗಿ ಪಿಓಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸುವಂತೆ ಅವರು ಮನವಿ ಮಾಡಿದರು.
ಸಮಿತಿ ರಚಿಸಲು ಸಲಹೆ: ಪರಿಸರ ಪ್ರಕೃತಿ ಉಳಿಸಲು, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್, ಪಿಓಪಿ ಬಳಕೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಸರ ಇಲಾಖೆ, ಪೆÇಲೀಸ್ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಪರಸ್ಪರ ಸಹಕಾರದಿಂದ ಕಾರ್ಯೋನ್ಮುಖವಾಗುವಂತೆ ಮತ್ತು ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಇದರ ಬಗ್ಗೆ ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡುವಂತೆಯೂ ಅವರು ಸಲಹೆ ಮಾಡಿದರು.