ಒಳಮೀಸಲಾತಿ | ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ನೀಡಿ : ಆರ್.ಅಶೋಕ್

Update: 2024-10-29 12:39 GMT

ಬೆಂಗಳೂರು : ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಿ ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರಕಾರ ಒಳಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಒಳಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಇದು ಜಾರಿ ಮಾಡಲು ಇಷ್ಟವಿಲ್ಲ. ಎಲ್ಲ ಅವಕಾಶವಿದ್ದರೂ ಮತ್ತೆ ಆಯೋಗ ರಚಿಸಿ, ಕಾಯಲು ನಿರ್ಧರಿಸಲಾಗಿದೆ ಎಂದು ದೂರಿದರು.

ಬಿಜೆಪಿ ಸರಕಾರ ಒಳಮೀಸಲಾತಿಯನ್ನು ಒಪ್ಪಿತ್ತು. ಎಷ್ಟು ಮೀಸಲು ನೀಡಬೇಕೆಂದು ತಿಳಿಸಲಾಗಿತ್ತು. ಇನ್ನು ಯಾವುದೇ ಹುನ್ನಾರ ಮಾಡದೆ ಸರಕಾರ ಒಳಮೀಸಲು ಜಾರಿಗೊಳಿಸಬೇಕು ಎಂದ ಅವರು, ರಾಜ್ಯದಲ್ಲಿ ಲವ್ ಜಿಹಾದ್‍ನಂತೆಯೇ, ವಕ್ಫ್ ಬೋರ್ಡ್‍ನಿಂದ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ಭೂಮಿಯನ್ನು ಹೇಗೆ ಕಬಳಿಸಬೇಕೆಂದು ಸಚಿವ ಝಮೀರ್ ಅಹ್ಮದ್ ಖಾನ್ ಯೋಜನೆ ರೂಪಿಸಿದ್ದಾರೆಂದು ಟೀಕಿಸಿದರು.

ಇನ್ನೂ ಕೆಲವರು ಸಂಸತ್ತು ನಮ್ಮದು, ವಿಧಾನಸೌಧವೂ ನಮ್ಮದು ಎಂದಿದ್ದಾರೆ. ಮುಸ್ಲಿಂ ಮತಾಂಧರ ವಿರುದ್ಧ ಇದ್ದ ಕೇಸು ವಾಪಸ್ ಪಡೆಯುವುದು, ಭಯೋತ್ಪಾದನೆ, ಪಾಕಿಸ್ತಾನಕ್ಕೆ ಜೈಕಾರ ಮೊದಲಾದವುಗಳಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. ವಕ್ಫ್ ಬೋರ್ಡ್ ರೈತರ ಜಮೀನುಗಳನ್ನು ಕಬಳಿಸುತ್ತಿದೆ ಎಂದರು.

ದ್ವೇಷ ರಾಜಕಾರಣ: ರಾಜ್ಯ ಸರಕಾರಕ್ಕೆ ಹಣವಿಲ್ಲದೆ ಪ್ರತಿಕ್ಷೇತ್ರಕ್ಕೆ 10 ಕೋಟಿ ರೂ.ಅನುದಾನ ನೀಡಿದೆ. ಆದರೆ, ಜಯನಗರ ಶಾಸಕರಿಗೆ ಆ ಅನುದಾನ ನೀಡಿಲ್ಲ. ಬಿಜೆಪಿ ಸರಕಾರವಿದ್ದಾಗ ರಾಮಲಿಂಗಾರೆಡ್ಡಿ ಕ್ಷೇತ್ರಕ್ಕೆ 80 ಕೋಟಿ ರೂ.ನೀಡಲಾಗಿತ್ತು. ಜಯನಗರದ ಜನರು ತೆರಿಗೆ ಕಟ್ಟಿದ್ದಾರೆ. ಈ ದ್ವೇಷ ರಾಜಕಾರಣದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News