ನಾಳೆ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’: ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವದಡಿ ಮಾನವ ಸರಪಳಿ ನಿರ್ಮಾಣ

Update: 2024-09-14 17:25 GMT

ಬೆಂಗಳೂರು: ರಾಜ್ಯ ಸರಕಾರವು ಸೆ.15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವದಡಿ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಂತೆ ಮಾನವ ಸರಪಳಿಯನ್ನು ರಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ತಿಳಿಸಿದ್ದಾರೆ.

ಶನಿವಾರದಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಿಧಾನಸೌಧ ಮುಂಭಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಉದ್ಘಾಟನೆಯ ಕಾರ್ಯಕ್ರಮದೊಂದಿಗೆ ಮಾನವ ಸರಪಳಿ ನಿರ್ಮಾಣ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.

ಈ ಬಾರಿಯ ಪ್ರಜಾಪ್ರಭುತ್ವ ದಿನದಂದು ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಂತೆ ಬೀದರ್ ನ ಬಸವ ಕಲ್ಯಾಣದ ಅನುಭವ ಮಂಟಪದಿಂದ ಚಾಮರಾಜನಗರದವರೆಗೆ ಸುಮಾರು 2500 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ಸರಪಳಿಯನ್ನು ರಚಿಸಿ, ಮಾರ್ಗದುದ್ದಕ್ಕೂ ಅರಣ್ಯ ಇಲಾಖೆಯ ಸಹಯೋಗದಲ್ಲಿ 10 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದರು.

ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ, ಅಪ್ಪಿಕೊಂಡಿರುವ ನಾಡಿನ ಎಲ್ಲ ಜನರು ಪ್ರಜಾಪ್ರಭುತ್ವ ದಿನವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಬೇಕು. ಇದು ಜಗತ್ತಿನಲ್ಲಿಯೇ ಅತಿ ಉದ್ದದ ಮಾನವ ಸರಪಳಿ ಎನಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ದಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಮಟ್ಟದಲ್ಲಿ ಸಂವಿಧಾನದ ಆಶಯ ಹೊತ್ತ ಸಂಘ-ಸಂಸ್ಥೆಗಳ ಸಹಕಾರವೂ ಸಿಕ್ಕಿದೆ. ಸರಕಾರದ ಉದ್ದೇಶಿತ ಈ ಕಾರ್ಯಕ್ರಮಕ್ಕೆ ಜನರ ದೊಡ್ಡ ಬೆಂಬಲ ಸಿಕ್ಕರೆ, ಇಡೀ ದೇಶ ಹಾಗೂ ಜಗತ್ತು ಕರ್ನಾಟಕದ ಕಡೆ ತಿರುಗಿ ನೋಡುವುರಲ್ಲಿ ಅನುಮಾನವೇ ಇಲ್ಲ ಎಂದು ಅವರು ಹೇಳಿದರು.

ಈಗಾಗಲೇ ಕಾರ್ಯಕ್ರಮಲ್ಲೆ ವಿವಿಧ ಇಲಾಖೆಗಳೊಂದಿಗೆ ಹಲವಾರು ಪೂರ್ವಸಿದ್ಧತಾ ಸಭೆಗಳನ್ನು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಕ್ರೀಯಾಶೀಲ ಸಂಘಟನೆಗಳೊಂದಿಗೆ (ರೈತರು, ಕಾರ್ಮಿಕರು, ಜವಳಿ ವರ್ತಕರು) ಸಭೆಯನ್ನು ನಡೆಸಿ ಎಲ್ಲರೂ ಪಾಲ್ಗೊಳ್ಳಲು ತಿಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

‘ಕಿತ್ತಳೆ ಹಣ್ಣು ಮಾರಾಟ ಮಾಡಿ ಸಂಪಾದಿಸಿದ ಹಣದಲ್ಲಿ ಮಂಗಳೂರಿನ ನ್ಯೂಪಡ್ಪು ಎಂಬಲ್ಲಿ ಶಾಲೆ ನಿರ್ಮಿಸಿ, ಕರ್ನಾಟಕ ರಾಜ್ಯ ರಾಜೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹರೇಕಳ ಹಾಜಬ್ಬ ಅವರನ್ನು ಈ ಕಾರ್ಯಕ್ರಮದ ರಾಯಭಾರಿಗಳನ್ನಾಗಿ ನೇಮಿಸಲಾಗಿರುತ್ತದೆ ಎಂದು ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಹೇಳಿದರು.

ಪೂರ್ವಸಿದ್ದತಾ ಕ್ರಮಗಳು: ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವದಡಿ ಆಯೋಜಿಸುತ್ತಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸರ್ಕಾರೇತರ ಸಂಸ್ಠೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಖಾಸಗಿ ವಲಯ, ನಾಗರೀಕ ಸಮಾಜ ಮತ್ತು ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಘ-ಸಂಸ್ಥೆಗಳು ಭಾಗವಹಿಸಲಿವೆ.

ಪ್ರತಿ 100 ಮೀ. ಒಬ್ಬರಂತೆ ವಿಭಾಗ ಅಧಿಕಾರಿ, ಪ್ರತಿ 1 ಕಿಮೀಗೆ ಒಬ್ಬರಂತೆ ಪ್ರದೇಶ ಅಧಿಕಾರಿ, ಪ್ರತಿ 3-5 ಕಿಮೀಗೆ ಒಬ್ಬರಂತೆ ತಾಲ್ಲೂಕು ಅಧಿಕಾರಿಯನ್ನು ನೇಮಿಸಲಾಗಿದೆ. ಮಾನವ ಸರಪಳಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ/ನಾಗರೀಕರಿಗೆ ಕುಡಿಯುವ ನೀರು, ಕ್ಷೀರಭಾಗ್ಯ ಯೋಜನೆಯಡಿ ಹಾಲು, ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ.

ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯ ಸಹಕಾರ ಸಹಕರಿಸಲಿದೆ. ತುರ್ತು ಚಿಕಿತ್ಸೆಗಾಗಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಆಂಬ್ಯುಲೆನ್ಸ್ ಹಾಗೂ ವಿವಿಧ ಇಲಾಖೆಗಳ ಸಿಬಬಂದಿಗಳನ್ನು ನೇಮಿಸಿ ಕಾರ್ಯೋಚಿತಗೊಳಿಸಲಾಗಿದೆ.

ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಲು ವಿಶೇಷವಾಗಿ ಹೆದ್ದಾರಿಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ಹಾಗೂ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಶಾಲೆ, ಕಾಲೇಜುಗಳು ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಇತರೆ ಎಲ್ಲ ಶೈಕ್ಷಣಿಕ ಸಂಸ್ಥೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕ್ರಮವಹಿಸಲಾಗಿದೆ.

ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯು ಪ್ರಮಾಣ ಪತ್ರವನ್ನು ಪಡೆಯಲು ಕ್ರಮವಹಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಛಾಯಾಚಿತ್ರವನ್ನು ಸೆರೆಹಿಡಿದು ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಚಿತ್ರವನ್ನು ಪ್ರಮಾಣ ಪತ್ರದಲ್ಲಿ ನೀಡಲು ಕ್ರಮವಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News