ಡಿಕೆಶಿ ವಿರುದ್ಧದ ತನಿಖೆ ವಿಳಂಬವಾಗಿಲ್ಲ: ಹೈಕೋರ್ಟ್ ಗೆ ಸಿಬಿಐ ಮಾಹಿತಿ

Update: 2023-07-14 14:20 GMT

ಬೆಂಗಳೂರು, ಜು.14: ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಸ್ವತಂತ್ರವಾಗಿ 596 ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, 84 ಸಾಕ್ಷಿಗಳನ್ನು ಪರಿಶೀಲಿಸಿದೆ. ತನಿಖೆಯಲ್ಲಿ ಯಾವುದೇ ರೀತಿಯಲ್ಲೂ ವಿಳಂಬವಾಗಿಲ್ಲ ಎಂದು ಹೈಕೋರ್ಟ್‍ಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತಿಳಿಸಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಸಿಬಿಐ ದಾಖಲಿಸಿರುವ ಎಫ್‍ಐಆರ್ ವಜಾಗೊಳಿಸುವಂತೆ ಕೋರಿ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠಕ್ಕೆ ಸಿಬಿಐ ಪರ ವಕೀಲರು ವಿವರಿಸಿದರು.

ವಿಚಾರಣೆ ವೇಳೆ ಸಿಬಿಐ ಪರ ವಾದಿಸಿದ ಪಿ.ಪ್ರಸನ್ನಕುಮಾರ್, ಸಿಬಿಐ ತನಿಖೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು. ಅರ್ಜಿದಾರರ ವಿರುದ್ಧದ ಆರೋಪ ಸಂಬಂಧ ಸಿಬಿಐ ಸ್ವತಂತ್ರವಾಗಿ 596 ದಾಖಲೆಗಳನ್ನು ಸಂಗ್ರಹಿಸಿದೆ. 84 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿ ಯಾವುದೇ ರೀತಿಯಲ್ಲೂ ತನಿಖೆ ವಿಳಂಬವಾಗಿಲ್ಲ. 2020ರ ಅ.3ಕ್ಕೆ ಎಫ್‍ಐಆರ್ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿದು ಶಿವಕುಮಾರ್ ಅವರು ಎಫ್‍ಐಆರ್ ವಜಾ ಕೋರಿ 2022ರ ಜುಲೈ 28ರಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವಿವರಿಸಿದರು.

ಕಾನೂನಿನ ಅನ್ವಯ ತನಿಖೆ ನಡೆದಿಲ್ಲ ಎಂಬ ಅರ್ಜಿದಾರರ ವಾದ ಸತ್ಯಕ್ಕೆ ದೂರವಾಗಿದೆ. ಪೊಲೀಸ್ ವರಿಷ್ಠಾಧಿಕಾರಿಯು ಪ್ರಕರಣದ ತನಿಖೆ ನಡೆಸಲು ಅನುಮತಿಸಬೇಕು. ಅದೇ ರೀತಿ ಸಿಬಿಐ ಪೊಲೀಸ್ ವರಿಷ್ಠಾಧಿಕಾರಿಯು ಡಿವೈಎಸ್ಪಿ ಅವರಿಗೆ ತನಿಖೆ ನಡೆಸಲು ಅನುಮತಿಸಿದ್ದಾರೆ. ಹೀಗಾಗಿ, ಇಲ್ಲಿ ಯಾವುದೇ ಅಕ್ರಮವಾಗಿಲ್ಲಎಂದು ಮಾಹಿತಿ ನೀಡಿದರು.

ಅರ್ಜಿದಾರರ ಪ್ರಮಾಣ ಪತ್ರ ಮತ್ತು ಎಫ್‍ಐಆರ್‍ನಲ್ಲಿನ ಆಸ್ತಿ ಮೌಲ್ಯದಲ್ಲಿ ವ್ಯತ್ಯಾಸವಿದೆ ಎಂದು ಆಕ್ಷೇಪಿಸಲಾಗಿದೆ. ಆದರೆ, ಸಿಬಿಐ ಇಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿನ ಲುಲ್ಲು ಮಾಲ್‍ನಲ್ಲಿ ಶಿವಕುಮಾರ್ ಅವರ ಶೇ. 21ರಷ್ಟು ಷೇರು ಮಾತ್ರ ಅಂದರೆ 7.8 ಕೋಟಿ ರೂಪಾಯಿಯನ್ನು ಪರಿಗಣಿಸಲಾಗಿದೆ. ಇಲ್ಲಿ ಭೂಮಿಯ ಮೌಲ್ಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಉಳಿದ ವಿಚಾರದ ಕುರಿತು ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.

ಅರ್ಜಿದಾರರು ಎಫ್‍ಐಆರ್ ದಾಖಲಿಸುವುದಕ್ಕೂ ಮುನ್ನ ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿಲ್ಲ ಎಂದು ವಾದಿಸಿದ್ದಾರೆ. ಎಫ್‍ಐಆರ್ ದಾಖಲಿಸುವುದಕ್ಕೂ ಮುನ್ನ ವಿವರಣೆ ನೀಡಲು ಅವಕಾಶ ನೀಡಲಾಗದು. ಆದರೆ, ಎಫ್‍ಐಆರ್ ದಾಖಲಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರಿಗೆ ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಆಗ ಅವರು ಒಂದಷ್ಟು ದಾಖಲೆ ನೀಡಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದು ಪೀಠಕ್ಕೆ ಅವರು ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜು.21ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News