ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರಿಗೆ ಅವಕಾಶ ಕೊಟ್ಟರೂ ಬೆಂಬಲಿಸುತ್ತೇನೆ : ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ಹೈಕಮಾಂಡ್‍ಗೆ ಬಿಟ್ಟ ವಿಚಾರವಾಗಿದ್ದು, ಪಕ್ಷದಲ್ಲಿ ಯಾರಿಗೆ ಅವಕಾಶ ಕೊಟ್ಟರೂ ಬೆಂಬಲಿಸುತ್ತೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿಯಿಲ್ಲ. ಮುಂದೆ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ. ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ ಎಂದರು.
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಈಶ್ವರ್ ಖಂಡ್ರೆ, ನಾನು ಹಾಗೂ ಸತೀಶ್ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರು. ನಮ್ಮ ನಡುವೆ ಸಮನ್ವಯತೆ ಇದೆ. ಯಾರಿಗೆ ಅವಕಾಶ ನೀಡಿದರೂ ಬೆಂಬಲಿಸುತ್ತೇವೆ ಎಂದರು.
ಹೊಸದಿಲ್ಲಿಯಲ್ಲಿ ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ನಮ್ಮ ವರಿಷ್ಠರನ್ನು ಆಗಾಗ ಭೇಟಿ ಮಾಡುತ್ತೇನೆ. ಪ್ರತಿ ಬಾರಿ ಭೇಟಿಯಾದಾಗಲೂ ವಿಶೇಷ ಇರುತ್ತದೆ. ಈಗಲೂ ಅಭಿವೃದ್ಧಿ ವಿಚಾರಗಳನ್ನು ಮಾತನಾಡಿದ್ದೇನೆ. ಅದನ್ನು ಬಿಟ್ಟು ಬೇರೇನೂ ಚರ್ಚೆ ಮಾಡಿಲ್ಲ ಎಂದರು.
ಬಿಜೆಪಿಗರು ಕೇಂದ್ರದ ವಿರುದ್ಧ ಪ್ರತಿಭಟಿಸದೆ ಇಲ್ಲಿ ನಾಟಕ ಮಾಡಿದರೆ ಪ್ರಯೋಜನವಿಲ್ಲ..!
ಬಿಜೆಪಿಯವರಿಗೆ ನೈತಿಕ ಕಳಕಳಿ ಇದ್ದರೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ಪೆಟ್ರೊಲ್, ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಕೇಂದ್ರದಿಂದ ಯಾವುದೇ ಬೆಲೆ ಇಳಿಕೆ ಆಗಿಲ್ಲ. ಅದನ್ನು ಖಂಡಿಸದೆ ಇಲ್ಲಿ ನಾಟಕ ಮಾಡಿದರೆ ಪ್ರಯೋಜನವಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.