ಪ್ರಾಸಿಕ್ಯೂಷನ್ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ| ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Update: 2024-09-09 12:36 GMT

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸೆ.12ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇದೇ ವೇಳೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ.

ರಾಜ್ಯಪಾಲ ಪ್ರಾಸಿಕ್ಯೂಷನ್ ಗೆ ಅನುಮತಿ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, 17A ಅಡಿ ಪ್ರಾಸಿಕ್ಯೂಷನ್ ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು. ಲಲಿತಾ ಕುಮಾರಿ ಪ್ರಕರಣ ಉಲ್ಲೇಖಿಸಿ ವಾದ ಮಂಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯವೆಂದಿದೆ. ಆದರೆ 17 ಎ ಅಡಿ ಅನುಮತಿಗೆ ಪ್ರಾಥಮಿಕ ತನಿಖೆ ಆಗಿರಬೇಕಿಂದಿಲ್ಲ? ವಿಚಾರಣೆ, ತನಿಖೆಗೂ ಮುನ್ನ 17A ಅನುಮತಿ ಬೇಕಲ್ಲವೇ ? ಅಡ್ವೊಕೆಟ್ ಜನರಲ್ ಗೆ ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಎಜಿ ಶಶಿಕಿರಣ್ ಶೆಟ್ಟಿ, 17 ಎ ಅಡಿಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಖಾಸಗಿ ದೂರುದಾರರನ್ನು ಪೊಲೀಸರಿಗೆ ಮೇಲ್ತಸ್ತರದಲ್ಲಿ ಇಡಲಾಗದು. ತನಿಖಾಧಿಕಾರಿ ತನಗೆ ಬರುವ ಮಾಹಿತಿ ಪರಿಶೀಲಿಸುತ್ತಾನೆ. ಆದರೆ ಖಾಸಗಿ ದೂರುದಾರರ ವಿಷಯದಲ್ಲಿ ಹೀಗಾಗುವುದಿಲ್ಲ ಎಂದರು.

ವಾದ ಮುಂದುವರೆಸಿದ ಎಜಿ ಶಶಿಕಿರಣ್ ಶೆಟ್ಟಿ, ಯಾವ ಕೇಸ್ ನಲ್ಲಿ ಪ್ರಾಥಮಿಕ ತನಿಖೆ ಬೇಕೆಂಬುದನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು 22 ವರ್ಷಕ್ಕಿಂತ ಹಳೆಯ ಕೇಸ್ ಆಗಿರುವುದರಿಂದ ಪ್ರಾಥಮಿಕ ತನಿಖೆ ಬೇಕು ಎಂದು ಎಜಿ ವಾದಿಸಿದರು‌. ಇದು ಪೊಲೀಸ್ ಅಧಿಕಾರಿಯ ಮುಂದೆ ದೂರು ಕೊಟ್ಟಾಗ. ಆದರೆ ಖಾಸಗಿ ದೂರುದಾರರಿಗೆ ಇದು ಅನ್ವಯವಾಗುವುದಿಲ್ಲವೆಂದು ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಪೊಲೀಸರಿಗೆ ದೂರು ನೀಡಿದ ನಂತರ 15 ದಿನಗಳಿಂದ 6 ವಾರ ಕಾಲಾವಕಾಶ ಇದೆ, ಆದರೆ ಅದಕ್ಕೆ ಕಾಯದೇ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದು ಆರೋಪಿಸಿದರು‌. ಎಲ್ಲ ನಾಗರಿಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗಲಿದೆ ಎಂದರು. ಹೀಗಾಗಿಯೇ ಡಾ.ಅಶೋಕ್ ಕೇಸ್ ನಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಪ್ರಸ್ತಾಪಿಸಿದರು‌.

ವಾದ ಮುಂದುವರಿಸಿದ ಎಜಿ ಶಶಿಕಿರಣ್ ಶೆಟ್ಟಿ, ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. ಸರ್ಕಾರಕ್ಕೆ ಷೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಕೇಂದ್ರ ಸರ್ಕಾರದ 17A ಮಾರ್ಗಸೂಚಿ ಆಧರಿಸಿ ಎಜಿ ವಾದಮಂಡನೆ ಮಾಡಿದರು. ಜೊತೆಗೆ ಸಿಎಂ ಕೈಗೊಂಡ ನಿರ್ಧಾರ, ಶಿಫಾರಸಿನಲ್ಲಿ ಅಪರಾಧದ ಅಂಶವಿರಬೇಕು.17A ಅಡಿ ಅನುಮತಿ ನೀಡುವಾಗ ಕೃತ್ಯ ಕರ್ತವ್ಯದ ಭಾಗವಾಗಿತ್ತೇ ಎಂದು ನೋಡಬೇಕು. ನಾರಾ ಚಂದ್ರಬಾಬು ನಾಯ್ಡು ವರ್ಸಸ್ ಆಂಧ್ರಪ್ರದೇಶ ಕೇಸ್, ಬಿ.ಎಸ್. ಯಡಿಯೂರಪ್ಪ ಪ್ರಕರಣ ಉಲ್ಲೇಖಿ ಡಿನೋಟಿಫಿಕೇಷನ್ ಕೇಸ್ ನಲ್ಲಿ ಸಿಎಂ ಬಿಎಸ್‌ವೈ ತೀರ್ಮಾನ ಕೈಗೊಂಡಿದ್ದರು ಆದರೆ ಈ ಕೇಸಿನಲ್ಲಿ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿಲ್ಲ ಎಂದು ಸಿಎಂ ಯಾವುದೇ ತಪ್ಪು ಮಾಡಿಲ್ಲವೆಂದು ಕೋರ್ಟ್ ಗಮನಕ್ಕೆ ತಂದರು. ಅಲ್ಲದೆ ಸಿಎಂ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ. ಇದಕ್ಕೆ ಅವಕಾಶ ಕೊಟ್ಟರೆ ದಿನನಿತ್ಯ ಹಲವು ಖಾಸಗಿ ದೂರು ದಾಖಲಾಗಬಹುದು. ಸಕ್ಷಮ ಪ್ರಾಧಿಕಾರಿಯೇ ಇದನ್ನೆಲ್ಲಾ ವಿಚಾರಣೆ ನಡೆಸಿದರೆ ಸಮಸ್ಯೆ ಆಗಲಿದೆ. ಪೊಲೀಸ್ ಅಧಿಕಾರಿಯ ಮೂಲಕವೇ 17A ಅಡಿ ಅನುಮತಿ ಪಡೆಯಬೇಕು. 3 ವಾಲ್ಯೂಮ್ ಗಳ ದಾಖಲೆಗಳನ್ನು ರಾಜ್ಯಪಾಲರ ಪರ ವಕೀಲರು ನೀಡಿದ್ದಾರೆ. ಆದರೆ ಶೋಕಾಸ್ ನೋಟಿಸ್ ನೀಡುವ ಮುನ್ನ ಪ್ರಾಥಮಿಕ ವರದಿ ಇಲ್ಲ. 17A ಅಡಿ ರಾಜ್ಯಪಾಲರೇ ಪ್ರಾಥಮಿಕ ತನಿಖೆ ನಡೆಸುವಂತಿಲ್ಲ.ತನಿಖಾಧಿಕಾರಿಯಂತೆ ರಾಜ್ಯಪಾಲರು ವರ್ತಿಸುವಂತಿಲ್ಲ ಎಜಿ ವಾದಿಸಿದರು. ಈ ವೇಳೆ ಮತ್ತೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ಪೊಲೀಸರು ಎಫ್‌ಐಆರ್ ದಾಖಲಿಸುವ ಮುನ್ನ 17A ಅನುಮತಿ ಪಡೆಯಬೇಕು. ಕೋರ್ಟ್ ಸೂಚಿಸಿದ್ದರೆ ಎಫ್‌ಐಆರ್ ದಾಖಲಾಗುತ್ತಿತ್ತು. ಇದನ್ನು ತಡೆಯಲು ಖಾಸಗಿ ದೂರುದಾರರಿಗೆ ಅನುಮತಿ ಪಡೆಯುವ ಅವಕಾಶ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಮತ್ತೆ ವಾದ ಮಂಡಿಸಿದ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ, ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು, ರಾಜ್ಯಪಾಲರಲ್ಲ. ರಾಜ್ಯಪಾಲರು ಅನುಸರಿಸಿದ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ. ರಾಜ್ಯಪಾಲರು ಖಾಸಗಿ ದೂರುದಾರರಿಗೆ ಅವಕಾಶವನ್ನೇ ನೀಡಬಾರದಿತ್ತು. ದೂರುದಾರ ಪ್ರದೀಪ್ ಕುಮಾರ್ ಪೊಲೀಸರಿಗೆ ದೂರನ್ನೇ ನೀಡಿರಲಿಲ್ಲ. ಖಾಸಗಿ ದೂರುದಾರರ ಮನವಿಯನ್ನು ರಾಜ್ಯಪಾಲರು ಹಿಂತಿರುಗಿಸಬೇಕಿತ್ತು. ಸಚಿವ ಸಂಪುಟದ ನಿರ್ಧಾರವನ್ನು ತಿರಸ್ಕರಿಸುವ ಅನಿಯಂತ್ರಿತ ಅಧಿಕಾರವಿಲ್ಲ. ರಾಜ್ಯಪಾಲರ ಆದೇಶದಲ್ಲಿ ಇದಕ್ಕೆ ಕಾರಣಗಳಿರಬೇಕು. ರಾಜ್ಯಪಾಲರು ಪರಿಶೀಲಿಸಿದ ಕಡತದಲ್ಲಲ್ಲ. ಸ್ನೇಹಮಯಿ ಕೃಷ್ಣ ಮನವಿಯಲ್ಲಿ ಸಿಬಿಐ ತನಿಖೆ ಕೋರಲಾಗಿದೆ. ರಾಜ್ಯಪಾಲರ ಆದೇಶ 17A ಅಡಿ ಇರಬೇಕೇ ಹೊರತು ಅವರ ಫೈಲ್ ನೋಟಿಂಗ್ ಗಳಲ್ಲ ಎಂದು ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡನೆ ಮುಕ್ತಾಯಗೊಳಿಸಿದರು.

ಇನ್ನು ಇದೇ ವೇಳೆ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿ, 1996 - 1999 ಅವಧಿಯಲ್ಲಿ ಡಿಸಿಎಂ ಆಗಿದ್ದಾಗ ಡಿನೋಟಿಫಿಕೇಷನ್ ಮಾಡಲಾಗಿದೆ. 2004-2007 ರಲ್ಲಿ ಡಿಸಿಎಂ ಆಗಿದ್ದಾಗ ಭೂಪರಿವರ್ತನೆ ಮಾಡಲಾಗಿದೆ.2013 - 2018 ವರೆಗೆ ಸಿಎಂ ಆಗಿದ್ದಾಗ ಪರಿಹಾರದ ಸೈಟ್ ಗೆ ಅರ್ಜಿ ಸಲ್ಲಿಸಲಾಗಿದೆ. 2018 - 2022 ವರೆಗೆ ಸಿದ್ದರಾಮಯ್ಯ ಶಾಸಕರಾಗಿದ್ದರು. ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ಮುಡಾದಿಂದ ಸೇಲ್ ಡೀಡ್ ಮಾಡಿಕೊಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗದೇ ಸೇಲ್ ಡೀಡ್ ಮಾಡಲಾಗಿದೆ.ಅಧಿಕಾರ ದುರುಪಯೋಗ ಪಡಿಸಿಕೊಂಡು ಹೀಗೆ ಮಾಡಲಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆ ನಡೆದಿವೆ. ಪತ್ನಿಗೆ ಬೇರೆ ಆದಾಯದ ಮೂಲಗಳಿರಲಿಲ್ಲ. ಆದಾಯ ತೆರಿಗೆ ರಿಟರ್ನ್ ಅನ್ನು ಪತ್ನಿ ಫೈಲ್ ಮಾಡಿಲ್ಲ. ಹೀಗಾಗಿ ಪತ್ನಿಯ ಆಸ್ತಿಯನ್ನು ಪತಿಯ ಆಸ್ತಿ ಎಂದೇ ಪರಿಗಣಿಸಬೇಕು. ಸಿದ್ದರಾಮಯ್ಯ ಮೇಲಿನ ಆರೋಪಗಳಿಗೆ ಪುರಾವೆಗಳಿವೆ ಎಂದು ವಾದಮಂಡಿಸಿದರು. ವಾದಗಳನ್ನ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 12 ಕ್ಕೆ ಮುಂದೂಡಿದರು. ಅಲ್ಲದೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಣೆ ಮಾಡಿದೆ.


Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News