ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವುದಕ್ಕೆ ಸಾಧ್ಯವಿಲ್ಲ ಎನ್ನಲಾಗದು: ಹೈಕೋರ್ಟ್

Update: 2023-11-23 15:37 GMT

ಬೆಂಗಳೂರು, ನ.23: ಪತಿಯಾದವರು ಬ್ಯಾಂಕ್‍ನಿಂದ ಪಡೆದ ಓವರ್ ಡ್ರಾಫ್ಟ್ ಸಾಲ (ಒಡಿ) ಮರು ಪಾವತಿಗೆ ಮಾಸಿಕ ಕಂತುಗಳನ್ನು ಪಾವತಿ ಮಾಡಬೇಕಾಗಿದ್ದು, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವುದಕ್ಕೆ ಸಾಧ್ಯವಿಲ್ಲ ಎನ್ನಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ಮಾಸಿಕ 10 ಸಾವಿರ ರೂ. ಗಳ ಪರಿಹಾರ ನೀಡುವಂತೆ ಆದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ಅರ್ಜಿದಾರರು ಒಡಿ ಪಡೆದಿರುವುದಕ್ಕೆ ಪಾವತಿ ಮಾಡುತ್ತಿದ್ದಾರೆ. ಅದಕ್ಕಾಗಿ ಪಾವತಿ ಮಾಡಲು ಆದಾಯವಿದೆ. ಆದರೆ, ಪತ್ನಿಗೆ ಪರಿಹಾರ ನೀಡುವುದಕ್ಕೆ ಯಾವುದೇ ದುಡಿಮೆ ಇಲ್ಲ ಎಂಬುದಾಗಿ ಹೇಳುತ್ತಿರುವುದು ಅರ್ಥವೇ ಆಗುತ್ತಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣ ಸಂಬಂಧ ವಾದ ಆಲಿಸಿದ ನ್ಯಾಯಪೀಠ, ಉಡುಪಿ ನ್ಯಾಯಾಲಯದಲ್ಲಿ ಪತ್ನಿ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಅರ್ಜಿದಾರರು (ಪತಿ) ಒಂದು ಸಂಸ್ಥೆಯಲ್ಲಿ ಪಾಲುದಾರರಾಗಿದ್ದು, ಮಾಸಿಕ ಹಣ ಗಳಿಸುತ್ತಿದ್ದರು. ಈ ಸಂಬಂಧ ದಾಖಲೆಗಳನ್ನೂ ಸಲ್ಲಿಸಿದ್ದಾರೆ.

ಆದರೆ, ಉಡುಪಿ ಜಿಲ್ಲೆ ನ್ಯಾಯಾಲಯದ ಆದೇಶದ ನಂತರ ಅರ್ಜಿದಾರರು ಪಾಲುದಾರ ಸಂಸ್ಥೆಯಿಂದ ಹೊರ ಬಂದಿದ್ದಾರೆ. ಆದರೆ, ಬ್ಯಾಂಕ್‍ನಿಂದ ಪಡೆದ ಸಾಲವನ್ನು ಪಾವತಿ ಮಾಡುತ್ತಿದ್ದಾರೆ. ಅಲ್ಲದೆ, ಪತ್ನಿಗೆ ಜೀವನಾಂಶ ನೀಡುವುದಕ್ಕಾಗಿ ನಿರಾಕರಿಸಲು ಮುಂದಾಗುತ್ತಿದ್ದಾರೆ ಎಂದು ಪೀಠ ತಿಳಿಸಿದೆ.

ಅಂಜುಗಾರ್ಗ್ ವಿರುದ್ದದ ದೀಪಕ್ ಕುಮಾರ್ ಗಾರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ನ್ಯಾಯಪೀಠ, ಒಬ್ಬ ಸಮರ್ಥವಾಗಿರುವ ಪುರುಷ ಕಾನೂನು ಬದ್ಧವಾಗಿ ದುಡಿದು ಹೆಂಡತಿ ಮಕ್ಕಳನ್ನು ಪೋಷಣೆ ಮಾಡುವುದಕ್ಕೆ ಬದ್ಧರಿರಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣವೇನು?: ತಮಿಳುನಾಡಿನ ಕೊಯಮತ್ತೂರು ಮೂಲದ ಅರ್ಜಿದಾರರು 2021ರ ನ.29 ರಂದು ಉಡುಪಿ ಮೂಲದ ಮಹಿಳೆಯನ್ನು ವಿವಾಹವಾಗಿದ್ದರು. ಪತ್ನಿ ವಿವಾಹಕ್ಕೂ ಮುನ್ನ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು, ಪತಿಯ ಸೂಚನೆ ಮೇರೆಗೆ ಉದ್ಯೋಗವನ್ನು ತ್ಯಜಿಸಿದ್ದರು.

ಪತಿ ಪತ್ನಿಯ ನಡುವೆ ಉಂಟಾದ ಮನಃಸ್ಥಾಪದಿಂದ ಪತ್ನಿ ಪತಿಯನ್ನು ತ್ಯಜಿಸಿ ಪೋಷಕರೊಂದಿಗೆ ಬಂದು ನೆಲೆಸಿದ್ದರು. ಈ ನಡುವೆ ಜೀವನಾಂಶ ಕೋರಿ ಪತ್ನಿ ಉಡುಪಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾಸಿಕ 10 ಸಾವಿರ ರೂ. ಗಳ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News