ರಾಜ್ಯ ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ದುರದೃಷ್ಟಕರ: ಬಿ.ವೈ.ವಿಜಯೇಂದ್ರ
ವಿಜಯಪುರ: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಬರ ಪರಿಸ್ಥಿತಿ, ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ದುರದೃಷ್ಟಕರ. ಆದರೆ, ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ, ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿಲ್ಲ. ಕಂದಾಯ ಸಚಿವರು ಬೆಂಗಳೂರಿನ ಎಸಿ ರೂಮ್ ನಲ್ಲಿ ಸಭೆ ಮಾಡಿದ್ದಾರೆ. ಕಾಟಾಚಾರಕ್ಕೆ ಅಲ್ಲಿ-ಇಲ್ಲಿ ಭೇಟಿ ಕೊಟ್ಟಿದ್ದಾರೆ. ರೈತರಿಗೆ ಪರಿಹಾರ ನೀಡದ ಸಿಎಂ, ಅಲ್ಪಸಂಖ್ಯಾತರಿಗೆ 10ಸಾವಿರ ಕೋಟಿ ರೂ.ಕೊಡುವುದಾಗಿ ಹೇಳಿದ್ದರು. ಅಲ್ಲದೆ, ನಿನ್ನೆ 1ಸಾವಿರ ಕೋಟಿ ರೂ.ಅಲ್ಪಸಂಖ್ಯಾತರ ಕಾಲನಿಗಳಿಗೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಚುನಾವಣೆಯಲ್ಲಿ ಅವರಿಗೆ ಸಮಸ್ಯೆ ಆಗಲಿದೆ. ನಿಮ್ಮ ನಡವಳಿಕೆಯನ್ನು ಮತದಾರರು ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡಲಿದ್ದು, ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮಂಗಳಾರತಿ ಎತ್ತುತ್ತಾರೆ ಎಂದು ಅವರು ಭವಿಷ್ಯ ನುಡಿದರು.