ಹೆಚ್‌ಡಿಕೆಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ: ಸಚಿವ ಡಾ.ಎಚ್.ಸಿ ಮಹದೇವಪ್ಪ

Update: 2023-11-18 15:15 GMT

PHOTO: ಡಾ.ಎಚ್.ಸಿ ಮಹದೇವಪ್ಪ

ಮೈಸೂರು,ನ.18: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಸದನದ ಒಳಗೆ ಬಿಜೆಪಿಗೆ ಬೆಂಬಲ ನೀಡಿ, ಸದನದ ಹೊರಗೆ ಪ್ರತಿಭಟನೆ ಮಾಡುವ ನಾಟಕ ಆಡಿದ್ದ ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಉತ್ತಮ ಸಾರ್ವಜನಿಕ ಬದುಕಿನ ಭಾಗವಾಗಿ ಈ ಹಿಂದೆಯೇ ಸೈದ್ಧಾಂತಿಕ ಬದ್ಧತೆಯ ಪ್ರಾಮುಖ್ಯತೆ ಮತ್ತು ಅದು ನಾಯಕತ್ವದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಒಳ್ಳೆಯ ಮನಸ್ಸಿನಿಂದ ಹಿಂದೆಯೇ ಅವರಿಗೆ ನಾನು ಎಚ್ಚರಿಸಿದ್ದೆ.ಆದರೆ ಇದಾವುದನ್ನು ಗಂಭೀರವಾಗಿ ಪರಿಗಣಿಸದ ಅವರು ಈಗ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿ ಸೈದ್ಧಾಂತಿಕವಾಗಿ ತಾವೆಷ್ಟು ಅಧಃಪತನಕ್ಕೆ ಜಾರಿದ್ದಾರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಒಂದು ಉತ್ತಮ ಪ್ರಾದೇಶಿಕ ಪಕ್ಷವಾಗಿ ಸಂಘಟನೆ ಮತ್ತು ವಿಷಯಾಧಾರಿತ ಹೋರಾಟಗಳ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ತೋರಬೇಕಿದ್ದ ಅವರು ಈಗಲೂ ಸಹ ಅಧಿಕಾರ ಎಂದರೆ ಅತಂತ್ರ ಸ್ಥಿತಿಯಲ್ಲಿ ದೊರಕುವ ಅನಾಯಾಸ ಅವಕಾಶ ಎಂದುಕೊಂಡಿದ್ದು ನಗೆಪಾಟಲಿ ವಿಷಯವಾಗಿದೆ.ಬಿಜೆಪಿಯ ಎಲ್ಲ ಜನ ವಿರೋಧಿ ನೀತಿಗಳ ಸಂದರ್ಭದಲ್ಲಿ ಮೌನವಾಗಿದ್ದು ಕೆಲವಕ್ಕೆ ಬೆಂಬಲವನ್ನೂ ನೀಡಿದ ಕುಮಾರಸ್ವಾಮಿ ಅವರು ಅಧಿಕಾರ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ಬಹಳಷ್ಟು ಹತಾಶೆಯಿಂದ ವರ್ತಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ.

ಇನ್ನು ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ತಳಬುಡವಿಲ್ಲದ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಆಗಿದ್ದಾಗ ವರ್ಗಾವಣೆಗಳನ್ನು ಮಾಡಿಲ್ಲವೇ? ಅದನ್ನೂ ಅವರು ದಂಧೆ ಎಂದು ಪರಿಗಣಿಸುತ್ತಾರಾ ಎಂಬುದನ್ನು ಸ್ಪಷ್ಟ ಪಡಿಸಲಿ.

ಪ್ರಾದೇಶಿಕ ಪಕ್ಷದ ನಾಯಕನಾಗಿ, ರಾಜ್ಯದ ಜನರ ಸಂಕಷ್ಟಗಳಿಗೆ ತೆರೆದ ಮನಸ್ಸಿನಿಂದ ದನಿಯಾಗುವ ಬಹುದೊಡ್ಡ ಜವಾಬ್ದಾರಿ ಕುಮಾರಸ್ವಾಮಿ ಅವರ ಮೇಲಿದೆ. ಆದರೆ ಅತಂತ್ರ ಸ್ಥಿತಿಯಲ್ಲಿ ಅಧಿಕಾರ ಪಡೆಯುವ ಉದ್ದೇಶ ಹೊಂದಿರುವ ಅವರಿಗೆ, ಜನರ ಬದುಕಿನ ಕಷ್ಟಗಳಾಗಲೀ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳು ನಿರ್ವಹಿಸುವ ಪಾತ್ರದ ಕುರಿತಾಗಲೀ ತಿಳಿದಿಲ್ಲ ಎಂಬುದಕ್ಕೆ ಅವರ ನಡವಳಿಕೆಗಳೇ ಮತ್ತೆ ಮತ್ತೆ ಸಾಕ್ಷಿ ಎನ್ನುವಂತಿವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News