ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್‌ಗೆ 1,75,574 ಮತಗಳ ಅಂತರದಿಂದ ಜಯ

Update: 2024-06-04 14:17 GMT

ಜಗದೀಶ್ ಶೆಟ್ಟರ್

ಬೆಂಗಳೂರು : ತೀವ್ರ ಪೈಪೋಟಿ ಸೃಷ್ಟಿಯಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ 1,75,574 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋಲು ಕಂಡಿದ್ದಾರೆ.

ಜಗದೀಶ್ ಶೆಟ್ಟರ್ 7,56,471 ಮತಗಳನ್ನು ಪಡೆದರೆ, ಮೃಣಾಲ್ ಹೆಬ್ಬಾಳ್ಕರ್ 5,80,897 ಮತ ಪಡೆದಿದ್ದಾರೆ. ಒಟ್ಟಾರೆ, ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13,75,285 ಮತಗಳು ಚಲಾವಣೆಗೊಂಡಿದ್ದವು.

ಇನ್ನೂ, ಮಂಗಳವಾರ ಬೆಳಗಾವಿ ನಗರದ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಬೆಳಗ್ಗೆಯಿಂದಲೂ ಜಗದೀಶ್ ಶೆಟ್ಟರ್ ಮುನ್ನಡೆ ಕಾಯ್ದುಕೊಂಡರು. ಪ್ರತೀ ಸುತ್ತಿನಲ್ಲೂ ತಮ್ಮ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದರು. ಹಿನ್ನಡೆ ಆಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ನಿರಾಸೆಯಿಂದ ಮನೆ ಕಡೆ ಹೆಜ್ಜೆ ಹಾಕಿದ ದೃಶ್ಯ ಕಂಡಿತು.

ಇದೇ ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಶೆಟ್ಟರ್ ವಿರುದ್ಧ ಆರಂಭದಲ್ಲಿ ಜಿಲ್ಲೆ ಬಿಜೆಪಿ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದರು. 'ಶೆಟ್ಟರ್ ಗೋ ಬ್ಯಾಕ್' ಅಭಿಯಾನ ಮಾಡಿದ್ದರು. ಆನಂತರ, ಶೆಟ್ಟರ್, ನನಗೂ ಬೆಳಗಾವಿಗೂ 30 ವರ್ಷಗಳ ನಂಟಿದೆ. ಜಿಲ್ಲೆಗೆ ನನ್ನದೂ ಕಾಣಿಕೆ ಇದೆ ಎಂಬ ವಿಚಾರಗಳನ್ನು ಮತದಾರರಿಗೆ ಮನದಟ್ಟು ಮಾಡುವಲ್ಲಿ ಸಫಲರಾಗಿದ್ದರು.

ಗೆಲುವು ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, ‘ತಾನು ಇಲ್ಲಿಗೆ ಬಂದಾಗ, ಇಲ್ಲಿನ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಕ್ಷೇತ್ರದ ಅನೇಕ ಕಾರ್ಯಕರ್ತರು ತಾನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ನಾಯಕವೆಂದು ಗೌರವಿಸಿ ಹಗಲು ರಾತ್ರಿ ತನಗಾಗಿ ಪ್ರಚಾರ ಮಾಡಿದರು. ಅವರ ಸಹಾಯ ಮತ್ತು ಬೆಂಬಲವನ್ನು ತಾನ್ಯಾವತ್ತೂ ಮರೆಯಲಾರೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News