ಕಾಂಗ್ರೆಸ್ ಸರೋವರವಿದ್ದಂತೆ, ಎಲ್ಲ ಪಕ್ಷಗಳ ನಾಯಕರು ಸೇರಬಯಸುವುದು ಸಹಜ: ಡಿ.ಕೆ.ಶಿವಕುಮಾರ್
ಬೆಂಗಳೂರು: ನದಿಗಳು ಎಲ್ಲಿ ಹುಟ್ಟಿದರೂ ಕೊನೆಗೆ ಸಮುದ್ರಕ್ಕೇ ಸೇರುತ್ತವೆ. ಹಾಗೆಯೇ ಎಲ್ಲ ಪಕ್ಷದ ನಾಯಕರು ಕೊನೆಗೆ ಕಾಂಗ್ರೆಸ್ ಪಕ್ಷವನ್ನು ಸೇರುವುದು ನೋಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಮಾನಸ ಸರೋವರವಿದ್ದಂತೆ ಅದಕ್ಕೊಂದು ಭವ್ಯ ಇತಿಹಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿರುವ ಇಂದಿರಾಗಾಂಧಿ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ, ಮಾಜಿ ಶಾಸಕರಾದ ಸುಕುಮಾರ್ ಶೆಟ್ಟಿ ಹಾಗೂ ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ದೇಶದಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ ಬಿಜೆಪಿಯವರು 370, 380 ಸ್ಥಾನಗಳನ್ನು ಗೆಲ್ಲುತ್ತೇನೆ ಎನ್ನುತ್ತಿದ್ದಾರೆ, ಅಷ್ಟೊಂದು ಸ್ಥಾನಗಳನ್ನು ಗೆಲ್ಲುವವರು ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ನಾಯಕರುಗಳನ್ನು ಹುಡುಕಿ ಹುಡುಕಿ ಕರೆದುಕೊಂಡು ಹೋಗುತ್ತಿರುವುದೇಕೆ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಬಿಜೆಪಿಯವರು ರಾಜ್ಯದಲ್ಲಿ ಕನಿಷ್ಠ 10ರಿಂದ 15 ಸ್ಥಾನಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಗೆ ಬದಲಾವಣೆ ಮಾಡಲು ಹೊರಟಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿದೆ. ಇದರಿಂದ ನಮ್ಮ ಕಾಂಗ್ರೆಸ್ ಪಕ್ಷ ಎಷ್ಟು ಗಟ್ಟಿಯಿದೆ ಎಂಬುದು ತಿಳಿಯುತ್ತದೆ. ಜನರು ಬದಲಾವಣೆ ಬಯಸಿದ್ದಾರೆ, ಕಾಂಗ್ರೆಸ್ ಬದಲಾವಣೆ ತರುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಸಾವಿರಾರು ಜನ ಸೇರುತ್ತಿದ್ದಾರೆ. ಪಕ್ಷಕ್ಕೆ ಸೇರುವವರೆಲ್ಲರಿಗೂ ತುಂಬು ಹೃದಯದ ಸ್ವಾಗತ. ಕಾಂಗ್ರೆಸ್‍ನ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸವಾಗಿದೆ. ನಾನು ಯಾವುದೇ ಆಮಿಷಗಳನ್ನು ಒಡ್ಡದೆ ನಾಯಕರುಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸೇರಿ ದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಜಯಪ್ರಕಾಶ್ ಹೆಗಡೆ, ಹಿಂದಿನ ಕಹಿ ನೆನಪುಗಳನ್ನು ಹಿಂದಕ್ಕೆ ಬಿಟ್ಟು ಸಿಹಿ ನೆನಪುಗಳನ್ನು ಮುಂದಕ್ಕೆ ತೆಗೆದುಕೊಂಡಬೇಕು. ಸರಕಾರದ ಗ್ಯಾರಂಟಿಗಳನ್ನು ಮನೆ ಮನೆಗೆ ತೆರಳಿ ನೆನಪಿಸುವ ಕಾರ್ಯವಾಗಬೇಕು. ಮೀನುಗಾರರು, ರೈತರು, ಮಹಿಳೆಯರು, ಯುವಕರಿಗೆ ಕಾಂಗ್ರೆಸ್ ಸರಕಾರ ನೀಡಿದ ಕಾರ್ಯಕ್ರಮಗಳನ್ನು ಜನರಿಗೆ ನೆನಪಿಸುವ ಕಾರ್ಯವಾಗದರೆ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಜಯಿಸಲು ಸಾಧ್ಯವಾಗುತ್ತದೆ, ಹಾಗೆಯೇ ಕರವಳಿ ಭಾಗದಲ್ಲೂ ಕಾಂಗ್ರೆಸ್ ಬಲಿಷ್ಠವಾಗುತ್ತದೆ ಎಂದರು.
ಈವರೆಗೆ ವಿಧಾಸಭೆ ಸದಸ್ಯನಾಗಿ, ಲೋಕಸಭೆ ಸದಸ್ಯನಾಗಿ, ಸಚಿವನಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ನಾವು ಯೋಚನೆಗಳಲ್ಲಿ ತೊಡಗಿದಾಗ ನಮಗೆ ಯೋಜನೆಗಳು ಹೊಳೆಯುತ್ತವೆ. ಸದ್ಯದಲ್ಲೇ ಸಮೀಪಿಸಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಗೆಲುವು ತರಬೇಕು ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ನಾನು ಮೂಲತಃ ಕಾಂಗ್ರೆಸ್ಸಿನವ. 30 ವರ್ಷಗಳಿಂದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಕಾರಣಾಂತರಗಳಿಂದ 2014ರಲ್ಲಿ ಬಿಜೆಪಿಯವರು ಬಲವಂತದಿಂದ ಕರೆದು ಟಿಕೆಟ್ ಕೊಟ್ಟರು. ಈಗ ನನ್ನ ಪಕ್ಷಕ್ಕೆ ಮರಳಿರುವುದು ಸಂತಸ ತಂದಿದೆ. ನಮ್ಮ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ. ಬಿಜೆಪಿಯವರು ನಿನ್ನೆ, ಮೊನ್ನೆಯವರೆಗೂ ನನ್ನನ್ನು ಕಾಂಗ್ರೆಸ್‍ಗೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿದರು, ಆದರೆ, ನಮ್ಮದು ಪ್ರಾಮಾಣಿಕ ಗರ್ಭಗುಡಿ, ಅವರಂತೆ ಡುಪ್ಲಿಕೇಟ್ ಗರ್ಭಗುಡಿಯಲ್ಲ ಎಂದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನನ್ನದು ಜಾತ್ಯತೀತ ಮನಸ್ಸು, ಮೊದಲಿನಿಂದಲೂ ನನಗೆ ಕಾಂಗ್ರೆಸ್ ಮನಸ್ಥಿತಿ ಇತ್ತು. ಹಾಗಾಗಿ ನಾನು ಮತ್ತೆ ಪಕ್ಷಕ್ಕೆ ಮರಳಿ ಬಂದಿದ್ದೇನೆ. ಇಡೀ ದೇಶದಲ್ಲಿ ಸಾಮಾಜಿಕ ನ್ಯಾಯದ ತತ್ವವುಳ್ಳ ಸರಕಾರವಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕರ ಮಾತ್ರ. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತೇವೆಂದರೆ ಅದು ಕಾಂಗ್ರೆಸ್ ಅನ್ನು ಬೆಂಬಲಿಸಿದಂತೆ. ಸಂವಿಧಾನ ವಿರೋಧಿಗಳಿಗೆ ಕಳೆದ ಚುನಾವಣೆಯಲ್ಲಿ ಬುದ್ದಿ ಕಲಿಸಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಉತ್ತರ ಕೊಡಬೇಕು. ನಾನು ಮೂಡಿಗೆರೆಯಲ್ಲಿ ಪಕ್ಷವನ್ನು ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದಸಲೀಂ ಅಹ್ಮದ್, ಚಂದ್ರಪ್ಪ, ಶಾಸಕರಾದ ತಮ್ಮಯ್ಯ, ರಾಜೇಗೌಡ, ಮುಖಂಡ ಬಿ.ಎಲ್.ಶಂಕರ್ ಸೇರಿ ಉಪಸ್ಥಿತರಿದ್ದರು.