ಪ್ರಾದೇಶಿಕ ಅಸ್ಮಿತೆಯನ್ನು ಕಳೆದುಕೊಂಡಿರುವ ಜೆಡಿಎಸ್ ‘ಪ್ರಾದೇಶಿಕ ಪಕ್ಷ’ವಲ್ಲ : ಸಚಿವ ಪ್ರಿಯಾಂಕ್ ಖರ್ಗೆ

Update: 2024-04-16 13:46 GMT

ಬೆಂಗಳೂರು : ಪ್ರಾದೇಶಿಕ ಅಸ್ಮಿತೆಯ ಘನತೆಯನ್ನು ನರೇಂದ್ರ ಮೋದಿ ಕಾಲಿನ ಕೆಳಗೆ ಇಟ್ಟಿರುವ ಜೆಡಿಎಸ್ ‘ಪ್ರಾದೇಶಿಕ ಪಕ್ಷ’ ಎಂದು ಕರೆಸಿಕೊಳ್ಳಲು ಯಾವ ಅರ್ಹತೆಯನ್ನೂ ಹೊಂದಿಲ್ಲ. ಅಸ್ತಿತ್ವಕ್ಕಾಗಿ ನಿಮ್ಮ ಪಕ್ಷ ಸ್ವಾಭಿಮಾನ ಮಾರಿಕೊಂಡಿರಬಹುದು, ಆದರೆ ಕನ್ನಡಿಗರ ಸ್ವಾಭಿಮಾನ ಮಾರಾಟಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಕುಟುಂಬದ ಕೇವಲ 3 ಸೀಟಿಗಾಗಿ 6 ಕೋಟಿ ಕನ್ನಡಿಗರನ್ನು ‘ಕೇವಲ’ ಮಾಡಿಬಿಟ್ಟಿರಲ್ಲ ದೇವೇಗೌಡರೇ. ನಿಮ್ಮ ಹಿರಿತನ, ನಿಮ್ಮ ಮುತ್ಸದ್ದಿತನ ಎಲ್ಲವೂ ಒಂದೇ ಏಟಿಗೆ ಮಣ್ಣುಪಾಲು ಮಾಡಿಬಿಟ್ಟಿರಲ್ಲ ಎಂದು ಹೇಳಿದ್ದಾರೆ.

ಇಡೀ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ ಕರ್ನಾಟಕ, ಕನ್ನಡಿಗರ ಶ್ರಮದ ದುಡಿಮೆಯಿಂದ ದೇಶ ನಡೆಯುತ್ತಿದೆ ಎಂಬ ಸಂಗತಿ ಕೇವಲವೇ? ಐಟಿ, ಬಿಟಿ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ಅತಿ ಹೆಚ್ಚು ಕೊಡುಗೆ ನೀಡುತ್ತಿರುವುದು ಕರ್ನಾಟಕ, ಕನ್ನಡಿಗರ ಈ ಸಾಧನೆ ಕೇವಲವೇ? ಎಂದು ಪ್ರಶ್ನಿಸಿದ್ದಾರೆ.

ನಾವೀನ್ಯತೆಯ ಸೂಚ್ಯಂಕದಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ಒಂದನೇ ಸ್ಥಾನದಲ್ಲಿದೆ, ಇದು ಕೇವಲದ ವಿಷಯವೇ? ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ಇಡೀ ದೇಶದಲ್ಲೇ ನಂಬರ್ 1 ಸ್ಥಾನ ಕಾಯ್ದುಕೊಂಡು ಬಂದಿದೆ, ಇದು ಕೇವಲದ ಸಂಗತಿಯೇ? ಇಂದು ದೇಶದ ಆರ್ಥಿಕತೆಯಲ್ಲಿ ಬಹುದೊಡ್ಡ ಪಾಲು ಕನ್ನಡಿಗರದ್ದಿದೆ, ಎಂಬ ಸಂಗತಿ ಮರೆತುಬಿಟ್ಟಿರಾ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

ದೇವೇಗೌಡರೇ, ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದಿದ್ದ ನೀವೀಗ ಮಾಜಿ ಪ್ರಧಾನಿ ಎಂಬುದನ್ನು ಮರೆತು ಹಾದಿಬೀದಿಯಲ್ಲಿರುವ ಮೋದಿ ಭಕ್ತನಂತೆ ಮಾತಾಡುತ್ತಿರುವುದು ಶೋಭೆಯಲ್ಲ. ನಿಮ್ಮ ಪ್ರಕಾರ ಪ್ರಧಾನಿ ಎಂದರೆ ಚಕ್ರವರ್ತಿಯೇ, ಒಂದು ರಾಜ್ಯದ ಮುಖ್ಯಮಂತ್ರಿ ಎಂದರೆ ಕಪ್ಪ ಕೊಡುವ ಸಾಮಂತ ರಾಜರೇ? ಎಂದು ಅವರು ಪ್ರಶ್ನಿಸಿದ್ದಾರೆ.

ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ಮಾಜಿ ಪ್ರಧಾನಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಪರಿ ಕಳಂಕ ತರುತ್ತಿರುವುದು ಸಹಿಸುವ ಸಂಗತಿಯಲ್ಲ. ಪ್ರಾದೇಶಿಕ ಅಸ್ಮಿತೆಯ ಘನತೆಯನ್ನು ಮೋದಿ ಕಾಲಿನ ಕೆಳಗೆ ಇಟ್ಟಿರುವ ಜೆಡಿಎಸ್ ‘ಪ್ರಾದೇಶಿಕ ಪಕ್ಷ’ ಎಂದುಕೊಳ್ಳಲು ಯಾವ ಅರ್ಹತೆಯನ್ನೂ ಹೊಂದಿಲ್ಲ. ಅಸ್ತಿತ್ವಕ್ಕಾಗಿ ನಿಮ್ಮ ಪಕ್ಷ ಸ್ವಾಭಿಮಾನ ಮಾರಿಕೊಂಡಿರ ಬಹುದು, ಆದರೆ ಕನ್ನಡಿಗರ ಸ್ವಾಭಿಮಾನ ಮಾರಾಟಕ್ಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News