‘ಕನ್ನಡಿಗರ ಉದ್ಯೋಗ ಮೀಸಲಾತಿಗೆ ಟೀಕೆ ಸರಿಯಲ್ಲ’ : ಮಸೂದೆ ಜಾರಿಗೊಳಿಸಲು ಸಾಹಿತಿ, ಚಿಂತಕರ ಪಟ್ಟು

Update: 2024-07-31 13:57 GMT

ಬೆಂಗಳೂರು : ಕನ್ನಡಿಗರ ಉದ್ಯೋಗ ಮೀಸಲಾತಿ ಮಸೂದೆ ಜಾರಿ ಸಂಬಂಧ ಉದ್ಯಮಿಗಳು ವಾಸ್ತವ ತಿಳಿಯದೆ ಟೀಕೆ ಮಾಡುವುದು ಸರಿಯಲ್ಲ. ರಾಜ್ಯ ಸರಕಾರ ಮಸೂದೆ ಜಾರಿಗೆ ಗಟ್ಟಿಯಾಗಿ ನಿಲ್ಲಬೇಕು ಎಂದು ನಾಡಿನ ಸಾಹಿತಿಗಳು, ಚಿಂತಕರು ಆಗ್ರಹಿಸಿದ್ದಾರೆ.

ಬುಧವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ಮಾಜಿ ಸಂಸದ ಡಾ.ಎಲ್.ಹನುಮಂತಯ್ಯ, ಸಿನೆಮಾ ನಿರ್ದೇಶಕ ಟಿ.ಎಸ್.ನಾಗಭರಣ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಡಾ.ಮನು ಬಳಿಗಾರ್, ರಾ.ನಂ.ಚಂದ್ರಶೇಖರ, ಸ.ರ.ಸುದರ್ಶನ ಸೇರಿದಂತೆ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಮಸೂದೆಯನ್ನು ಟೀಕಿಸಿದ ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ಉದ್ಯಮಿಗಳ ಅನಿಸಿಕೆಗಳನ್ನು ಖಂಡಿಸಿದ್ದಾರೆ.

‘ಯಾವುದೇ ಒಂದು ಪ್ರದೇಶದಲ್ಲಿ ಉದ್ಯಮಗಳ ಸ್ಥಾಪನೆಯ ಉದ್ದೇಶ ಆ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಸ್ಥಳೀಯರ ಉದ್ಯೋಗಾವಕಾಶಗಳ ಹೆಚ್ಚಳ ಉದ್ದೇಶ ಹೊಂದಿದೆ. ಇದಕ್ಕಾಗಿಯೇ ರಾಜ್ಯ ಸರಕಾರವು ಕನ್ನಡಿಗರ ಉದ್ಯೋಗ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಹೊರಟಿದ್ದು ಸ್ವಾಗತಾರ್ಹ’ ಎಂದು ತಿಳಿಸಿದ್ದಾರೆ.

ಆದರೆ, ತಾತ್ಕಾಲಿಕವಾಗಿ ಅದನ್ನು ತಡೆಹಿಡಿದಿರುವುದು ವಿಷಾದನೀಯ. ಕೂಡಲೇ ಈ ಮಸೂದೆಯನ್ನು, ಅಗತ್ಯವಾದರೆ ಶಾಸಕಾಂಗದ ವಿಶೇಷ ಅಧಿವೇಶನ ಕರೆದು ಜಾರಿಗೆ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಈ ಮಸೂದೆಯು ಕನ್ನಡಿಗರ ಬಹುದಿನಗಳ ಬೇಡಿಕೆವೊಂದನ್ನು ಈಡೇರಿಸುವಂತೆ ಆಗಲಿದೆ. ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡುವ ಉದ್ದೇಶದ ಮಸೂದೆ ಇದಾಗಿರುವುದಿಲ್ಲ, ಮೀಸಲಾತಿ ಕಳೆದ ಮೇಲೆ ಉಳಿದ ಹುದ್ದೆಗಳಲ್ಲಿ ದೇಶದ ಎಲ್ಲ ಭಾಷಿಕರಿಗೂ ಅವಕಾಶ ತೆರೆದಿರುತ್ತದೆ.ಆದ್ದರಿಂದ ಈ ಮಸೂದೆಯಿಂದ ಅನ್ಯ ಭಾಷಿಕರ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ ಎಂದು ಅವರುಗಳು ಪ್ರತಿಪಾದಿಸಿದ್ದಾರೆ.

ಮಸೂದೆಯಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಿದ, 15 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೆಲೆಸಿರುವ, ಕನ್ನಡ ಓದಲು ಬರೆಯಲು ಬಲ್ಲ ವ್ಯಕ್ತಿ ‘ಕನ್ನಡಿಗ’ ಎಂದು ರೂಪಿಸಲಾಗಿದೆ. ಕನ್ನಡ ನಾಡಿನಲ್ಲಿ ಕಲಿತ ವ್ಯಕ್ತಿ ಕನ್ನಡವನ್ನು ಓದಲು ಬರೆಯಲು ಶಾಲೆಯಲ್ಲಿ ಖಂಡಿತವಾಗಿಯೂ ಕಲಿತಿರುತ್ತಾನೆ. ಇಲ್ಲವಾದರೆ ನಿಗದಿತ ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂಬ ನಿಯಮವನ್ನು ಪೂರೈಸಬೇಕಾಗಿದೆ. ಆದರೆ, ಈ ನಿರ್ಬಂಧವನ್ನು ವಿರೋಧಿಸುವುದು ಖಂಡನೀಯ ಎಂದು ಅವರು ಹೇಳಿದರು.

ಅದು ಅಲ್ಲದೆ, ಪಾಶ್ಚಾತ್ಯ ದೇಶಗಳಲ್ಲಿ ಕಲಿಯಲು ಅಥವಾ ಉದ್ಯೋಗ ಪಡೆಯಲು ಭಾರತದಿಂದ ಹೋಗುವವರು ಇಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಗೇಟ್, ಟಾಫಿಲ್ ಎಂಬಂತಹ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.ಇದನ್ನು ಒಪ್ಪಿಕೊಳ್ಳುವ ಉದ್ಯಮಿಗಳು ಕನ್ನಡ ಪರೀಕ್ಷೆ ನಿರಾಕರಿಸುವುದು ಖಂಡನೀಯ ಎಂದು ಸಾಹಿತಿಗಳು ತಮ್ಮ ಹೇಳಿಕೆ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News