ಬೆಳಗಾವಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ ಖಂಡಿಸಿದ ನಡ್ಡಾ; ಮಣಿಪುರದ ಬಗ್ಗೆ ಮೌನವೇಕೆ ಎಂದು ಪ್ರಶ್ನಿಸಿದ ಜನರು

Update: 2023-12-15 11:03 GMT

ಸಿ.ಟಿ. ರವಿ / ಜೆ.ಪಿ. ನಡ್ಡಾ (PTI)

ಹೊಸದಿಲ್ಲಿ: ಬೆಳಗಾವಿಯಲ್ಲಿ ದಲಿತ ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ನಗ್ನ ಮೆರವಣಿಗೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಈ ಘಟನೆ “ನಾಚಿಕೆಗೇಡು” ಎಂದು ಬಣ್ಣಿಸಿದ್ಧಾರೆ. ಮಹಿಳೆಯರ ವಿರುದ್ಧದ ಇಂತಹ ಬರ್ಬರ ಅಪರಾಧಗಳು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಆಗಾಗ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಪಕ್ಷದ ಮಹಿಳಾ ಸಂಸದರನ್ನೊಳಗೊಂಡ ಪಂಚ-ಸದಸ್ಯರ ಸತ್ಯಶೋಧನಾ ಸಮಿತಿಯನ್ನೂ ನಡ್ಡಾ ರಚಿಸಿದ್ದಾರೆ. ಈ ಸಮಿತಿಯು ಈ ಘಟನೆ ನಡೆದ ಗ್ರಾಮಕ್ಕೆ ತೆರಳಿ ಅಲ್ಲಿನ ಘಟನೆಯ ಬಗ್ಗೆ ಸತ್ಯಶೋಧನೆ ನಡೆಸಿ ವರದಿ ಸಲ್ಲಿಸಲಿದೆ. ಈ ಸಮಿತಿಯಲ್ಲಿ ಸಂಸದೆಯರಾದ ಅರ್ಪಿತಾ ಸಾರಂಗಿ, ಸುನೀತಾ ದುಗ್ಗಲ್‌, ಲಾಕೆಟ್‌ ಚಟರ್ಜಿ, ರಂಜೀತಾ ಕೊಲಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ ಅಶೋಲ್‌ ಲಕ್ರಾ ಇರಲಿದ್ದಾರೆ.

ಬೆಳಗಾವಿ ಘಟನೆ ಬಗ್ಗೆ ನಡ್ಡಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರೂ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಣಿಪುರದಲ್ಲಿ ನಡೆದ ಇಂತಹುದೇ ಘಟನೆ ಬಗ್ಗೆ ಬಿಜೆಪಿ ನಾಯಕರ ಮೌನವೇಕೆ, ಸಂತ್ರಸ್ತೆ ಅಲ್ಲಿ ಕ್ರೈಸ್ತೆಯಾಗಿರುವುದು ಕಾರಣವೇ ಅಥವಾ ಅಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕಾರಣವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಬೆಳಗಾವಿ ಘಟನೆ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಕಾಲಿಕ ಕ್ರಮಕೈಗೊಂಡಿದೆ ಆದರೆ ಮಣಿಪುರ ವಿಚಾರದಲ್ಲಿ ಅಲ್ಲಿನ ಸರ್ಕಾರ ಮತ್ತು ಬಿಜೆಪಿ ಮೌನವಹಿಸಿದ್ದನ್ನೂ ನೆಟ್ಟಿಗರು ನೆನಪಿಸಿದ್ಧಾರೆ.

ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ವಿಳಂಬಿತವಾಗಿ ಸಿ ಟಿ ರವಿ ಪ್ರತಿಕ್ರಿಯಿಸಿರುವುದನ್ನೂ ನೆಟ್ಟಿಗರು ಪ್ರಶ್ನಿಸಿದ್ದಾರೆ. ಕರ್ನಾಟಕದವರಾಗಿರುವ ಹೊರತಾಗಿಯೂ ಇಲ್ಲಿಯ ತನಕ ಘಟನೆ ಖಂಡಿಸದೆ ಪಕ್ಷಾಧ್ಯಕ್ಷರು ಖಂಡಿಸಿದ ಹೇಳಿಕೆ ಪೋಸ್ಟ್‌ ಮಾಡಿರುವುದೂ ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿದೆ.

ಡಿಸೆಂಬರ್‌ 11ರಂದು ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ, ಮಹಿಳೆಯ ಮಗ ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ನಡೆಯಲಿದ್ದ ಹುಡುಗಿಯೊಂದಿಗೆ ಓಡಿ ಹೋದನೆಂಬ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿ, ನಗ್ನ ಮೆರವಣಿಗೆ ನಡೆಸಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಲಾಗಿತ್ತು ಎಂದು ದೂರಲಾಗಿದೆ.

ಈ ಸಂಬಂಧ ಎಂಟು ಮಂದಿಯನ್ನು ಬಂಧಿಸಿರುವ ಪೊಲೀಸರು ಇನ್ನೂ ಎಂಟು ಆರೋಪಿಗಳಿಗೆ ಶೋಧ ಮುಂದುವರಿಸಿದ್ಧಾರೆ. ಈ ಘಟನೆಯನ್ನು ಕರ್ನಾಟಕ ಹೈಕೋರ್ಟ್‌ ಕೂಡ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.

ಈ ಘಟನೆಯನ್ನು ಖಂಡಿಸಿ ಬಿಜೆಪಿ ಡಿಸೆಂಬರ್‌ 16ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News