ಕಡೂರು: ಹಿಂದಿನ ತಹಶೀಲ್ದಾರ್ ಉಮೇಶ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು
ಕಡೂರು, ಆ.13: ಸರಕಾರಿ ಬೀಳು ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪದಲ್ಲಿ ಹಿಂದಿನ ಕಡೂರು ತಹಶೀಲ್ದಾರ್ ಜೆ.ಉಮೇಶ್ ಸೇರಿದಂತೆ ಮತ್ತಿಬ್ಬರ ವಿರುದ್ಧ ಶನಿವಾರ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡೂರು ತಾಲೂಕಿನ ಬೀರೂರು ಹೋಬಳಿಯ ಉಳಿನಾಗರು ಗ್ರಾಮದ ಸರ್ವೆ ನಂ. 43ರಲ್ಲಿ 5.04 ಎಕರೆ ಸರಕಾರಿ ಬೀಳು ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತರೀಕೆರೆ ಉಪವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ಅವರು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ತಹಶೀಲ್ದಾರ್ ಜೆ.ಉಮೇಶ್ ದೂರು ನೀಡಿದ್ದಾರೆ.
ಈ ದೂರಿನ ಅನ್ವಯ ಈ ಹಿಂದೆ ಕಡೂರು ತಹಶೀಲ್ದಾರ್ ಆಗಿದ್ದ ಜೆ.ಉಮೇಶ್, ನಿವೃತ್ತ ಶಿರಸ್ತೇದಾರ್ ನಂಜುಂಡಯ್ಯ ಹಾಗೂ ಬೀರೂರು ಹೋಬಳಿ ರಾಜಸ್ವ ನಿರೀಕ್ಷಕರಾಗಿದ್ದ ಕಿರಣ್ ಕುಮಾರ್ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.
ಜೆ.ಉಮೇಶ್ ಇದೀಗ ಭೂ-ಸ್ವಾಧೀನಾಧಿಕಾರಿ ಸೀಬರ್ಡ್ ನೌಕಾನೆಲೆ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಂಜುಂಡಪ್ಪ ಈಗಾಗಲೇ ವೃತ್ತಿಯಿಂದ ನಿವೃತ್ತರಾಗಿದ್ದರೆ, ರಾಜಸ್ವ ನಿರೀಕ್ಷಕ ಕಿರಣ್ಕುಮಾರ್ (ಹಾಲಿ ನಿಲಂಭನೆ)ಯಲ್ಲಿ ಇದ್ದಾರೆ. ಪೌತಿ,ದಾನ, ಕ್ರಯದಂತೆ ಖಾತೆ ದಾಖಲಿಸಿರುವ ಕ್ರಮವು ನಿಯಮ ಬಾಹಿರವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.